ಜನಸೇವೆಯಿಂದ ಮಾತ್ರ ಪ್ರಜಾತಂತ್ರ ಗೆಲ್ಲಲು ಸಾಧ್ಯವಿದೆ : ಸಚಿವ ಸತೀಶ

ಸಂಸದೆ ಪ್ರಿಯಾಂಕಾ, ಬೂತಮಟ್ಟದ ಕಾರ್ಯಕರ್ತರ ಸನ್ಮಾನ ಸಮಾರಂಭ 

ಹಾರೂಗೇರಿ 30: ರಾಜಕಾರಣ ಯಾರ ಮನೆಯ ಆಸ್ತಿ ಅಲ್ಲ. ಅವಕಾಶ ಸಿಕ್ಕಾಗ ಜನರಿಗೆ ಒಳ್ಳೆಯ ಕೆಲಸ ಮಾಡಬೇಕು.  ದುಡ್ಡಿದ್ದ ಮಾತ್ರಕ್ಕೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ನಿರಂತರ ಜನಸೇವೆಯಿಂದ ಜನತಂತ್ರ ಗೆಲ್ಲಲು ಸಾಧ್ಯವಿದೆ ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಹೇಳಿದರು. 

ಪಟ್ಟಣದ ಬಿ.ಆರ್‌.ದರೂರ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ಆಯೋಜಿಸಿದ ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಹಾಗೂ ಬೂತಮಟ್ಟದ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.  

ಸಂಸದೆ ಪ್ರೀಯಾಂಕಾ ಗೆಲುವಿಗೆ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. ಕುಡಚಿ ಮತಕ್ಷೇತ್ರದ ನೀರಾವರಿ, ಸರ್ಕಾರಿ ಶಾಲಾ ಕಟ್ಟಡ, ರಸ್ತೆ, ಆಸ್ಪತ್ರೆ, ವಿದ್ಯುತ್ ಸಮಸ್ಯೆಗಳ ಬಗ್ಗೆ ಜನರು ಮನವಿ ಸಲ್ಲಿಸಿದ್ದು, ಶೀಘ್ರ ಪರಿಹರಿಸಲಾಗುವುದು. ನಾವು ರಾಜಕೀಯದಲ್ಲಿ ಗೆದ್ದರೂ, ಸೋತರೂ ಜನರ ಸಮಸ್ಯೆಗಳನ್ನು ಪರಿಹರಿಸಿ, ಅಭಿವೃದ್ಧಿ ಕೆಲಸಗಳನ್ನು ಮಾಡುವುದು ನಮ್ಮ ಕರ್ತವ್ಯವೆಂದರು.  

ಲೋಕಸಭೆ ಚುನಾವಣೆಯಲ್ಲಿ 3 ದಿನಗಳವರೆಗೆ ಕುಡಚಿ ಕ್ಷೇತ್ರದಲ್ಲೇ ವಾಸ್ತವ್ಯ ಮಾಡಿದ್ದು, ಸೋಲಿಸಲು ತೆರೆಮರೆಯಲ್ಲಿ ಕುತಂತ್ರ ನಡೆದಿತ್ತು. ಸುಮ್ಮನೇ ಆರೋಪ ಮಾಡುವುದಿಲ್ಲ. ರಾಯಕೀಯದಲ್ಲಿ ಇನ್ನೂ ಎಲ್ ಬೋರ್ಡ ಇದೆ. ನಿಧಾನವಾಗಿ ಹೋಗಬೇಕು. ಇಲ್ಲದಿದ್ದರೆ ಮತ್ತೆ ಲೈಸನ್ಸ ಸಿಗುವುದಿಲ್ಲ. ಶಾಸಕ ತಮ್ಮಣ್ಣನವರ ಅಂತವರು ರಾಜ್ಯಾದ್ಯಂತ ಠೀಕೆ, ಟಿಪ್ಪಣಿ ಮಾಡುತ್ತಲೇ ಇರುತ್ತಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಬ್ಯಾಟ್ ಸಿಕ್ಕಾಗ ಚೆನ್ನಾಗಿ ಬಾರಿಸುತ್ತೇನೆ. ಬಹಳ ದಿನಗಳ ನಂತರ ಒಂದು ಮಗು ಹುಟ್ಟಿದೆ. ಅದನ್ನೇ ಸರಿಯಾಗಿ ಜೋಪಾನ ಮಾಡಿ ಸಾಕು ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ಕುಟುಕಿದರು.   

ಕುಡಚಿ/ರಾಯಬಾಗ ವಿಧಾನಸಭೆ ಸ್ಪರ್ಧೆಗೆ ತಯಾರಿ? :  ಮುಂದಿನ ಚುನಾವಣೆ ವೇಳೆಗೆ ಕುಡಚಿ ಮತ್ತು ರಾಯಬಾಗ ವಿಧಾನಸಭೆ ಮತಕ್ಷೇತ್ರ ಮೀಸಲಾತಿ ಹೋಗಿ ಸಾಮಾನ್ಯ ಆಗುವ ಲಕ್ಷಣಗಳಿವೆ. ಕುಡಚಿ ಮತಕ್ಷೇತ್ರದಲ್ಲಿ ಮನೆ ಕಟ್ಟುವ ಯೋಜನೆಯಲ್ಲಿದ್ದು, ಒಂದು ವರ್ಷದಲ್ಲಿ ಮನೆ ಕಟ್ಟಡ ಮುಗಿಸಿ, ಈ ಕ್ಷೇತ್ರದ ಜನರಿಗೆ ತಾವಿದ್ದಲ್ಲೇ ಕೆಲಸಗಳನ್ನು ಮಾಡಿ ಕೊಡುತೇವೆ. ನಾನು ಮತ್ತು ಸಂಸದೆ ಪ್ರೀಯಾಂಕಾ ಹಾಗೂ ರಾಹುಲ್ ಹೆಚ್ಚಿನ ಸಮಯವನ್ನು ಗೋಕಾಕ ನಂತರ ಹಾರೂಗೇರಿಯಲ್ಲಿ ಹೆಚ್ಚಿನ ಸಮಯ ಕಳೆಯಲಿದ್ದೇವೆ.  

ಮಕ್ಕಳಿಗೆ ಸಲಹೆ : ಮುಂದಿನ 5ವರ್ಷಗಳಲ್ಲಿ ಜನಸಾಮಾನ್ಯರ ಜೊತೆ ಬೆರೆತು, ಕಷ್ಟ, ಸುಖ, ಸಮಸ್ಯೆಗಳನ್ನು ಆಲಿಸಿ, ಅಭಿವೃದ್ಧಿ ಕೆಲಸಗಳ ಬಗ್ಗೆ ಪರಿಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಜನಸಾಮಾನ್ಯರನ್ನು ಕಾಯಿಸಬಾರದು, ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ರಾಜಕೀಯದಲ್ಲಿ ಕೆಲಸ ಮಾಡದಿದ್ದರೂ ಸುಳ್ಳು ಹೇಳಬಾರದು. ಜನರ ಪ್ರತಿಯೊಂದು ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸಮಸ್ಯೆಗಳಿಗೆ ಪರಿಹಾರ ನೀಡುವುದನ್ನು ಕಲಿಯಬೇಕು. ಮುಂದಿನ 30ರಿಂದ 40 ವರ್ಷಗಳವರೆಗೆ ಒಳ್ಳೆಯ ರಾಜಕೀಯ ಭವಿಷ್ಯವಿದ್ದು, ಜನರ ನೀರೀಕ್ಷೆಗೂ ಮೀರಿ ಒಳ್ಳೆಯ ಕೆಲಸ ಮಾಡಬೇಕು ಎಂದು ಮಕ್ಕಳಾದ ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಮತ್ತು  ಸಮಾಜ ಸೇವಕ ರಾಹುಲ್ ಜಾರಕಿಹೊಳಿ ಅವರಿಗೆ ಸಲಹೆ ನೀಡಿದರು. 

ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಮಾತನಾಡಿ ತಮ್ಮ ಮನೆಯ ಮಗಳಾಗಿ ನನಗೆ ಆಶೀರ್ವಾದ ಮಾಡಿರುತ್ತೀರಿ. ಮುಂದೆ ದೇಶಕ್ಕಾಗಿ ಹಾಗೂ ಜನರ ಶ್ರೇಯೋಭಿವೃದ್ಧಿಗಾಗಿ ಒಳ್ಳೆಯ ಕೊಡುಗೆ ನೀಡುತ್ತೇನೆ. ನೀರೀಕ್ಷೆಗೂ ಮೀರಿ ನಿಮ್ಮ ಕೆಲಸ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಎಲ್ಲ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. 

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡುತ್ತ ಚುನಾವಣೆಯಲ್ಲಿ ಗೆದ್ದವರಿಗೆ ಸನ್ಮಾನ ಮಾಡುವುದು ಸಾಮಾನ್ಯ. ಆದರೆ ವೈಚಾರಿಕ ಸಿದ್ಧಾಂತದಿಂದ ತಮ್ಮ ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಸನ್ಮಾನ ಮಾಡುವುದು ಇತಿಹಾಸ. ನೂತನ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ ಅವರು ನಿರಂತರವಾಗಿ ಚಿಕ್ಕೋಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು. 

ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಅಮೀತ್ ಘಾಟಗೆ ನೂತನ ಸಂಸದರನ್ನು ಗೌರವಿಸಿ, 22000 ಮತಗಳ ಮುನ್ನಡೆ ನೀಡಿದ ಕ್ಷೇತ್ರದ ಜನರ ಋಣ ಮರೆಯುವುದಿಲ್ಲ ಎಂದರು. 

ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಹಗಲಿರುಳು ಕೆಲಸ ಮಾಡಿದ ಕಾರ್ಯಕರ್ತರನ್ನು ಸಚಿವರು, ಸಂಸದರು ಸನ್ಮಾನಿಸಿದರು. ಹಿರಿಯ ಮುಖಂಡ ಡಿ.ಎಸ್‌.ನಾಯಿಕ, ರಾಮಣ್ಣ ಗಸ್ತಿ, ಎನ್‌.ಎಸ್‌.ಚೌಗಲಾ, ದಸ್ತಗೀರ ಕಾಗವಾಡೆ, ಭೀಮು ಬದ್ನಿಕಾಯಿ, ಡಾ.ಸಿ.ಬಿ.ಕುಲಿಗೋಡ, ರಾಜಕೀಯ ಮುಖಂಡ ಬಸು ಸಾಯಣ್ಣವರ, ವಿಠ್ಠಲ ಹಳ್ಳೂರ, ರವಿ ಗಸ್ತಿ, ಮಹಾವೀರ ಮೋಹಿತೆ, ರೋಹನ ಜಮಖಂಡಿ, ಇಮಾಮುದ್ದಿನ ಸಜ್ಜನ, ವಿದ್ಯಾ ಅರಕೇರಿ, ಗೀರೀಶ ದರೂರ, ವಾಮನ ಹಟ್ಟಿಮನಿ, ಎಸ್‌.ಎ.ದಟವಾಡ, ಸುರೇಶ ಐಹೊಳೆ, ಅಶೋಕ ಕೊಪ್ಪದ, ಅಶೋಕ ಅರಕೇರಿ, ಮಧುಸೂದನ ಬೀಳಗಿ, ಸಂಜು ಬಾನೆ, ಯಲ್ಲಪ್ಪ ಶಿಂಗೆ, ಬುರಾನ ಶೇಖ, ರಮೇಶ ಯಡವಣ್ಣವರ, ಮುರಗೆಪ್ಪ ಬುಲಬುಲಿ, ಅಪ್ಪಾಸಾಬ ಸರಿಕರ, ಬಸು ಹುಲ್ಯಾಳ ಮೊದಲಾದವರು ಉಪಸ್ಥಿತರಿದ್ದರು. 

ರೇವಣ್ಣ ಸರವ ಸ್ವಾಗತಿಸಿದರು. ಬಿ.ಎಲ್‌.ಘಂಟಿ ಕಾರ್ಯಕ್ರಮ ನಿರೂಪಿಸಿದರು.