ಲೋಕದರ್ಶನ ವರದಿ
ಗದಗ: ಕ್ರೀಡಾಪಟುಗಳು ಸೋಲಿಗೆ ಎದೆಗುಂದದೆ ಗೆಲುವಿನತ್ತ ಚಿತ್ತಹರಿಸದಲ್ಲಿ ಮಾತ್ರ ಕ್ರೀಡಾ ಸಾಧನೆ ಮಾಡಲು ಸಾಧ್ಯ ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರು, ಗದಗ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಅವರು ಕರೆ ನೀಡಿದರು.
ಅವರು ಹುಲಕೋಟಿಯ ರಾಜೇಶ್ವರಿ ವಿದ್ಯಾನಿಕೇತನದಲ್ಲಿ ಆಯೋಜಿಸಿರುವ ಸಿ.ಬಿ.ಎಸ್.ಇ.ಕ್ಲಸ್ಟರ್ 8ರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಶನಿವಾರದಂದು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ, 'ಮಾತನಾಡುತ್ತಾ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ರೂಪಗೊಳ್ಳಲು ಕ್ರೀಡೆ ಅತೀ ಅಗತ್ಯವಾಗಿದೆ' ಎಂದರು. ದೀಮಂತ ನಾಯಕ ದಿ. ಕೆ.ಎಚ್.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ ಹಾಗೂ ರಾಜಕೀಯ ಮುತ್ಸದ್ಧಿ ಗದಗ ಶಾಸಕರಾದ ಸನ್ಮಾನ್ಯ ಎಚ್.ಕೆ.ಪಾಟೀಲರ ನೆಲದಲ್ಲಿ ರಾಜ್ಯದ ಸಿ.ಬಿ.ಎಸ್.ಇ. ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿರುವ ರಾಜೇಶ್ವರಿ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಸುಂದರ ಪರಿಸರದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರಲ್ಲದೆ ಕ್ರೀಡಾಪಟುಗಳಿಗೆ ಸ್ಪೂತರ್ಿದಾಯಕ ಜಿಲ್ಲೆ ಗದಗ ಎಂಬುದನ್ನು ಮರೆಯಲಾಗದು ಎಂದರು.
ಕ್ರೀಡಾಪಟುಗಳು ವಿದ್ಯಾರ್ಜನೆಗೆ ಮಹತ್ವಕೊಟ್ಟಷ್ಟು ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ಕೊಡಬೇಕಲ್ಲದೆ ಛಲ ಮತ್ತು ಸದೃಢ ದೇಹ, ಸಾಧಿಸುವ ಗುರಿ ಇದ್ದರೆ ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡುವ ಅವಕಾಶಗಳು ಮತ್ತು ಸರಕಾರದಿಂದ ದೊರೆಯುವ ಸೌಲಭ್ಯಗಳು ನಿಮ್ಮದಾಗುತ್ತವೆ ಎಂದರು. ನನ್ನ ಮಕ್ಕಳು ಹಾಗೂ ನಮ್ಮ ಅಣ್ಣನ ಮಕ್ಕಳು ಇದೇ ರಾಜೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಉನ್ನತ ಸಾಧನೆ ಮಾಡಿದ್ದು ನನಗೆ ಹೆಮ್ಮೆ ಅನಿಸುತ್ತದೆಯಲ್ಲದೆ ಕಲಿತ ಶಾಲೆಗೆ, ಕಲಿಸಿದ ಶಿಕ್ಷಕರ ಬಗೆಗೆ ಗೌರವ ಹೊಂದುವ ಜೊತೆಗೆ ಅಭಿಮಾನವನ್ನಿಟ್ಟುಕೊಳ್ಳಬೇಕೆಂದರಲ್ಲದೆ ಆರೋಗ್ಯಕರ ಚಿಂತನೆಗಳು ಆರೋಗ್ಯಯುತ ಮನಸ್ಸುಗಳು ಸದಾಕಾಲ ಉತ್ತಮ ಸ್ಥಾನಮಾನ ಗಳಿಸುವಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಸಿದ್ದಲಿಂಗೇಶ್ವರ ಪಾಟೀಲ ಮಾತನಾಡಿ ಕ್ರೀಡಾಪಟುಗಳು ಸದೃಢ ಶರೀರ ಹೊಂದಲು ದುಶ್ಚಟಗಳಿಂದ ದೂರವಿದ್ದು ನಿಗದಿತ ವ್ಯಾಯಾಮ, ಕ್ರೀಡಾಸಕ್ತಿ ಹೊಂದಿದಲ್ಲಿ ಕ್ರೀಡೆಯಲ್ಲಿ ಯಶಸ್ಸು ಕಾಣಬಹುದೆಂದರು.
ಸಹಕಾರಿ ರಂಗದ ಭೀಷ್ಮ ದಿ. ಕೆ.ಎಚ್.ಪಾಟೀಲ, ಶುದ್ಧ ಕುಡಿಯುವ ನೀರಿನ ಹರಿಕಾರ ಸನ್ಮಾನ್ಯ ಎಚ್.ಕೆ.ಪಾಟೀಲ, ರೈತಪರ ಹೋರಾಟಗಾರ ಡಿ.ಅರ್.ಪಾಟೀಲರನ್ನು ರಾಜ್ಯಕ್ಕೆ ರಾಷ್ಟ್ರಕ್ಕೆ ಕೊಟ್ಟಂತಹ ಹುಲಕೋಟಿ ನೆಲವು ಕ್ರೀಡಾಪಟುಗಳನ್ನು ಕೊಟ್ಟಿದೆಯಲ್ಲದೆ ಕ್ರೀಡಾಭಿಮಾನಿಗಳನ್ನು ಹೊಂದಿದೆ ಎಂದರು.
ವೇದಿಕೆಯ ಮೇಲೆ ಶ್ರೀರಾಜೇಶ್ವರಿ ವಿದ್ಯಾನಿಕೇತನದ ಕಬಡ್ಡಿ ಪಂದ್ಯಾವಳಿಯ ಮುಖ್ಯಸ್ಥರಾದ ಪಿ.ಕೆ.ಪಾಟೀಲ, ರಾಜೇಶ್ವರಿ ವಿದ್ಯಾನಿಕೇತನದ ಆಡಳಿತ ಮಂಡಳಿಯ ಉಪಾಧ್ಯಾಕ್ಷರಾದ ಓದುಗೌಡ್ರ, ಕಬಡ್ಡಿ ಪಂದ್ಯಾವಳಿಯ ಅಧ್ಯಕ್ಷರಾದ ಆರ್.ಎ.ದೇಸಾಯಿ, ಎನ್.ಆರ್.ಸಾಹುಕಾರ, ಬಿ.ಎ.ಬ್ಯಾಳಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಆರ್.ಎನ್.ಹಡಪದ, ಪ್ರಾಂಶುಪಾಲರಾದ ಬಿ.ಆರ್.ಮಂಗಳಾ, ಆಡಳಿತಾಧಿಕಾರಿಗಳಾದ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ಅರುಣ ಪಾಟೀಲ, ಡಾ. ಎಸ್.ಆರ್. ನಾಗನೂರ್, ತಾಲೂಕ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಮೋಹನ ದುರ್ಗನ್ನವರ, ಗದಗ ಗ್ರಾಮಾಂತರ ಬಿ.ಇ.ಓ ಎಮ್.ಎ. ರಡೇರ ಹಾಗೂ ಹುಲಕೋಟಿ ಗ್ರಾಮದ ಸರ್ವ ಸದಸ್ಯರು, ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಪಿ.ಯು.ಗೋಕಾವಿ ಪ್ರಾರ್ಥಿಸಿದರು. ಪಿ.ಬಿ.ಸರಮೋಕದಮ್ ಅವರು ಸ್ವಾಗತಿಸಿದರೆ, ಎನ್.ಎಸ್.ಬಾಗೋಡಿ ಅವರು ಪರಿಚಯಿಸಿದರು. ಕಾರ್ಯಕ್ರಮವನ್ನು ಬಂಕಾಪುರ ಹಾಗೂ ಮೀತು ದತ್ತಾ ನಿರೂಪಿಸಿದರೆ, ಜನ್ನಿಫರ ಜಯಕುಮಾರ ವಂದಿಸಿದರು.