ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು: ಪಾಟೀಲ

ಲೋಕದರ್ಶನ ವರದಿ

ಬೈಲಹೊಂಗಲ 16: ಸೋಲು, ಗೆಲುವನ್ನು ಸಮಾನವಾಗಿ  ಸ್ವೀಕರಿಸುವ ಮೂಲಕ ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿ ಉಳಿಸಿಕೊಂಡು ಹೋಗಬೇಕು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

       ಅವರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಬುಧವಾರ ಕೆ.ಆರ್.ಸಿ.ಇ.ಎಸ್. ಶಿಕ್ಷಣ ಸಂಸ್ಥೆಯ ಜಿ.ಜಿ. ದೇಶನೂರ ಕಲೆ, ಬಿ.ಎಂ. ಪಾಟೀಲ ವಾಣಿಜ್ಯ ಮತ್ತು ಎಸ್.ವಿ.ಸಾಧುನವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಇವುರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬೆಳಗಾವಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ,  ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸದೃಡ ದೇಹ ಮತ್ತು ಮನಸ್ಸನ್ನು ನಿಮ್ಮದಾಗಿಸಿಕೊಳ್ಳಿ. 

ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲರೂ ಜಯಶಾಲಿಗಳಾಗಲೂ ಸಾಧ್ಯವಿಲ್ಲ. ಆದ್ದರಿಂದ ಗೆದ್ದವರು ಇನ್ನಷ್ಟು ಸಾಧನೆ ಮಾಡುವ ಕಡೆಗೆ ಗಮನ ನೀಡಿ, ಸೋತವರು ಅಗತ್ಯ ತರಬೇತಿ, ನಿರಂತರ ಅಭ್ಯಾಸದ ಮೂಲಕ ಅವಕಾಶಗಳನ್ನು  ಎದುರು ನೋಡಬೇಕು.ಕ್ರೀಡೆಯಷ್ಟು ಜನಪ್ರಿಯತೆ ತಂದುಕೊಡುವ ಕ್ಷೇತ್ರ ಮತ್ತೊಂದಿಲ್ಲ. ರಾಜ್ಯ ಮತ್ತು ರಾಷ್ರ್ಟಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವ ಕಡೆಗೆ ಗಮನ ನೀಡಬೇಕು ಎಂದರು.

     ಸಂಸ್ಥೆಯ ಕಾರ್ಯದರ್ಶಿ ರಾಜಶೇಖರ ಬಡಸ ಕ್ರೀಡಾಜ್ಯೋತಿಯನ್ನು ಸ್ವಾಗತಿಸಿದರು. 

    ಸಂಸ್ಥೆಯ ನಿರ್ದೇಶಕರಾದ ಬೊಮ್ಮನಾಯ್ಕ ಪಾಟೀಲ, ಮಹಾಂತೇಶ ವಾಲಿ, ಕ್ರೀಡಾ ಪರಿವೀಕ್ಷಕ ಪ್ರಭು ಶಿವನಾಯ್ಕರ, ಎಂ.ಪಿ.ಉಪ್ಪಿನ,  ದೈಹಿಕ ನಿರ್ದೇಶಕರಾದ ಬಸವರಾಜ ಹರ್ಲಾಪುರ, ಡಿ.ಎಂ.ಎಣಗಿ, ಬಸವರಾಜ ತೋಟಗೇರ, ವೀರಣ್ಣ ಅಂಗಡಿ, ಶ್ರೀಶೈಲ ಚಿಕ್ಕೋಪ್ಪ, ಮಲ್ಲಿಕಾರ್ಜುನ ಇಂಚಲ, ಬಸವರಾಜ ಮಟ್ಟಿಹಾಳ, ಲೋಹಿತ ಕಾರೇಕರ, ವೆಂಕಟೇಶ ಬಾಗಲ, ಶಿವಯೋಗಿ ವಾಲಿ ಹಾಗೂ ಉಪನ್ಯಾಸಕರು ಇದ್ದರು.

   ಪ್ರಾಚಾರ್ಯ ಬಿ.ಬಿ.ಬೂದಿಹಾಳ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಟೀಲ ನಿರೂಪಿಸಿದರು. ಎನ್.ಒ.ಚನ್ನಕೇಶವ ವಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ  ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.