45 ವರ್ಷದ ಮಹಿಳೆ ಸಾವು: ಕೊರೋನಾಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿ

ಬೆಂಗಳೂರು, ಎ.19, ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ಸುಮಾರು 45 ವರ್ಷ ಪ್ರಾಯದ ಮಹಿಳೆಯೊಬ್ಬರು ರವಿವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗಾಗಿ ಜಿಲ್ಲೆಯಲ್ಲಿ ಕೊರೋನಾಗೆ ಇದು ಮೊದಲ ಬಲಿಯಾಗಿದೆ.ಈ ಮಹಿಳೆಗೆ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಗೆ ದಾಖಲಿಸಲಾಗಿತ್ತು. ಅವರ ಗಂಟಲಿನ ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಬಂದಿದ್ದು, ಈ ಮಧ್ಯೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈಗಾಗಲೆ 13 ಕೊರೋನ ಸೋಂಕಿತರ ಪೈಕಿ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಓರ್ವ ಚಿಕಿತ್ಸೆ ಪಡೆಯುತ್ತಿದ್ದಾರೆ.ಪರೀಕ್ಷಾ ವರದಿ ನಿರೀಕ್ಷೆಯಲ್ಲಿದ್ದಾಗಲೇ  ರೋಗಿ ಚಿಕಿತ್ಸೆಗೆ ಸ್ಪಂದಿಸದೆ ಏಪ್ರಿಲ್ 19ರಂದು ಬೆಳಗ್ಗೆ 9.15ಕಕೆ ಮೃತಪಟ್ಟಿದ್ದಾರೆ. ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಮಧ್ಯಾಹ್ನ ಬಂದಿದ್ದು, ಅದರಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ. ರೋಗಿಗೆ ಕೋವಿಡ್ 19 ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಶವ ಸಂಸ್ಕಾರವನ್ನು ವೈದ್ಯಕೀಯ ಶಿಷ್ಟಾಚಾರದಂತೆ  ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ನಡೆಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ತಿಳಿಸಿದ್ದಾರೆ.