ಡಿ.ಕೆ.ಶಿವಕುಮಾರ್ ದ್ವಂದ್ವನೀತಿ ಬಿಡಲಿ: ಬಿ.ಸಿ.ಪಾಟೀಲ್ ವಾಗ್ದಾಳಿ

ಕೊಪ್ಪಳ, ಮೇ.19,ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಳಗೊಂದು ಹೊರಗೊಂದು ಮಾತನಾಡುವ ಇಬ್ಬಗೆಯ,  ದ್ವಂದ್ವ ಧೋರಣೆ  ಕೈ ಬಿಡಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದರು.
ಕೊಪ್ಪಳ ನಗರದಲ್ಲಿಂದು ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿ ಉದ್ದೇಶಿಸಿ  ಮಾತನಾಡಿದರು. ಬಿಜೆಪಿ ಸರ್ಕಾರ ಕೊಡುವ ಆಹಾರಧಾನ್ಯ ಮತ್ತಿತರೆ ಅವಶ್ಯಕ ಪದಾರ್ಥಗಳ ಕಿಟ್ ಮೇಲೆ ಬಿಜೆಪಿ ಚಿಹ್ನೆ, ಶಾಸಕರ  ಪೋಟೋ ಹಾಕಿ  ಹಾಕಿ ವಿತರಿಸುತ್ತಿದ್ದಾರೆ ಎಂಬ ಅವರ ಟೀಕೆಯಲ್ಲಿ   ಹುರುಳಿಲ್ಲ  ಬಿಜೆಪಿ ಮುಖಂಡರು ತಮ್ಮ ಸ್ವಂತ ಖರ್ಚಿನಲ್ಲಿ ವಿತರಣೆ ಮಾಡುತ್ತಿರುವ ಕಿಟ್ ಗಳ ವಿಚಾರದಲ್ಲಿ  ಈ ರೀತಿ ಆರೋಪ ಮಾಡುವುದು ಸರಿಯಲ್ಲ. ವಿವರ ಸತ್ಯ ಸಂಗತಿ ಅರಿತು ಮಾತನಾಡಬೇಕೆಂದರು.
ಇತ್ತೀಚೆಗೆ ವಿಧಾನಸೌಧದಲ್ಲಿ ಸರ್ಕಾರ ನಡೆಸಿದ ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೊನಾ ಸಂಕಷ್ಟ ಸಮಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹತ್ತಾರು ಬಾರಿ ಹೊಗಳಿದ್ದಾರರೆ ನಂತರ ಹೊರಗೆ ಅನಗತ್ಯ ಟೀಕೆ-ಆರೋಪ ಮಾಡುತ್ತಿದ್ದಾರೆ.ಇಂಥ ಇಬ್ಬಗೆ ನೀತಿಯನ್ನು ಅವರು ಬಿಡಬೇಕೆಂದರು.ಹುರುಳಿಲ್ಲದಿದ್ದರೂ ಟೀಕೆ ಮಾಡುತ್ತಲೇ ಇರುವ ಅವರಿಗೆ ಟೀಕೆ ಮಾಡದಿದ್ದರೆ, ಸುದ್ದಿಯಲ್ಲಿ ಇರದಿದ್ದರೆ ಕಾಂಗ್ರೆಸ್ ಅಧ್ಯಕ್ಷ ಪಟ್ಟದಿಂದ ಕಿತ್ತೊಗೆಯುತ್ತಾರೆ ಎಂಬ ಭೀತಿ ಆವರಿಸಿಕೊಂಡಿದೆ ಎಂದು ವ್ಯಂಗ್ಯವಾಡಿದರು.ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಮಾಡುವ ಹುರುಳಿಲ್ಲದ ಆರೋಪಗಳಿಗೆ  ಮಹತ್ವ ನೀಡುವ ಅಗತ್ಯವಿಲ್ಲ. ಏಪ್ರಿಲ್ ತಿಂಗಳಿನಲ್ಲಿ ತೀರಾ ಅವಶ್ಯಕ ಸೇವೆ ಹೊರತುಪಡಿಸಿ ಉಳಿದ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ.ಈಗ ಮತ್ತೆ  ಪುನಾರಂಭವಾಗಿದ್ದು ಎಲ್ಲ ಬಿಲ್ ಗಳನ್ನು ವಿಲೇವಾರಿ ಮಾಡಲಾಗುತ್ತಿದೆ  ಬಿಲ್ ಮತ್ತು ಸಂಬಳ ನೀಡಲಾಗದಂಥ ಮಟ್ಟಕ್ಕೆ ಸರ್ಕಾರ ಹೋಗಿಲ್ಲ ಎಂದು ಆಕ್ರೋಶದಿಂದ ನುಡಿದರು.ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ವಿವರಿಸಿದ ಅವರು,ಪ್ರತಿ ರಾಜ್ಯಕ್ಕೂ ಓರ್ವ ಐಎಎಸ್ ಹಂತದ ಅಧಿಕಾರಿಯನ್ನು ನಿಯೋಜಿಸಿ ಸೇವಾಸಿಂಧು ಮೂಲಕ ಪ್ರಯಾಣ ಮಾಡುವವರ ವಿವರ ನೋಂದಾಯಿಸಿಕೊಂಡು ಕಳಿಸಲಾಗಿದೆ. ಸರ್ಕಾರ ಯಾರಿಗೂ ತೊಂದರೆಯಾಗದಂತೆ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ವಿವರಿಸಿದರು.