ಚಂಡೀಗಢ,ಏಪ್ರಿಲ್ 29, ಮೇ 3 ರ ನಂತರ ಇನ್ನೂ ಎರಡು ವಾರಗಳವರೆಗೆ ರಾಜ್ಯದಲ್ಲಿ ಕರ್ಫ್ಯೂ ವಿಸ್ತರಿಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಘೋಷಿಸಿದ್ದು, ಗುರುವಾರದಿಂದ ಕಂಟೈನ್‍ಮೆಂಟ್ ರಹಿತ ಮತ್ತು ಕೆಂಪು ರಹಿತ ವಲಯಗಳಲ್ಲಿ ಲಾಕ್‌ಡೌನ್ ಸಡಿಲಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಕರ್ಫ್ಯೂ ಈಗ ಮೇ 17 ರವರೆಗೆ ಜಾರಿಯಲ್ಲಿರುತ್ತದೆ. ಆದರೂ ಕೆಲ ನಿರ್ಬಂಧಗಳನ್ನು ಗುರುವಾರ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಗಳವರೆಗೆ ಸಡಿಲಿಸಲಾಗುವುದು. ಕಂಟೈನ್‍ಮೆಂಟ್ ಮತ್ತು ಕೆಂಪು ವಲಯಗಳಲ್ಲಿ ಲಾಕ್‌ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಲ್ಲಿರಲಿವೆ.ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಮತ್ತು ಸಮಾಜದ ವಿವಿಧ ವರ್ಗಗಳಿಂದ ಪಡೆದ ಅಭಿಪ್ರಾಯಗಳನ್ನು ಆಧರಿಸಿ, ಇನ್ನೂ ಕೆಲವು ಸಮಯದವರೆಗೆ ಲಾಕ್‌ಡೌನ್‌ನೊಂದಿಗೆ ಮುಂದುವರಿಯುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಎರಡು ವಾರಗಳ ನಂತರ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಸೋಂಕು ನಿಯಂತ್ರಣಕ್ಕೆ ಬಂದರೆ ಲಾಕ್‍ಡೌನ್ ಸಡಿಲಿಸಲಾಗುವುದು ಎಂದು ಹೇಳಿದ್ದಾರೆ.ಮುಖ್ಯಮಂತ್ರಿ ಘೋಷಿಸಿದ ನಿಯಮಗಳ ಸಡಿಲಿಕೆಯಂತೆ, ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗಳ ಕಾಲ ಶೇ 50 ರಷ್ಟು ಸಿಬ್ಬಂದಿಯೊಂದಿಗೆ ಅಂಗಡಿಗಳು ತೆರೆಯಲು ಅವಕಾಶವಿರುತ್ತದೆ. 11 ಗಂಟೆಯ ನಂತರ ಕರ್ಫ್ಯೂ ಮುಂದುವರೆಯುತ್ತದೆ. ಕರ್ಫ್ಯೂ ವೇಳೆ ಜನರು ಮನೆಗಳಿಂದ ಹೊರಬರದೆ, ಮನೆಗಳಲ್ಲೂ ವ್ಯಕ್ತಗತ ಅಂತರ ಕಾಪಾಡಿಕೊಳ್ಳಬೇಕಾಗುತ್ತದೆ. ಸಡಿಲಿಕೆ ವೇಳೆ ಹೊರಗೆ ಬರುವ ಜನರು ಕಡ್ಡಾಯವಾಗಿ ಮುಖಗವಸು ಧರಿಸಬೇಕಾಗುತ್ತದೆ.