ಕಲಬುರಗಿ, ಏ.7,ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.ಜಿಲ್ಲೆಯಲ್ಲಿ ಹೊಸದಾಗಿ ಮತ್ತಿಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಶರತ್ ಬಿ ಸ್ಪಷ್ಟಪಡಿಸಿದ್ದಾರೆ. 28 ವರ್ಷದ ಓರ್ವ ಮಹಿಳೆ ಹಾಗೂ 57 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.28 ವರ್ಷದ ಸೋಂಕಿತೆ ಕಲಬುರಗಿಯ ಶಹಬಾದ್ ನಿವಾಸಿಯಾಗಿದ್ದಾರೆ.ಕಳೆದ ಮೂರು ದಿನದ ಹಿಂದೆಯಷ್ಟೆ ಈ ಹಿಂದೆ 60 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿತ್ತು. ಇದೀಗ ಆ 60 ವರ್ಷದ ವೃದ್ದೆಯ 28 ವಯಸ್ಸಿನ ಸೊಸೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ದೆಹಲಿಯ ತಬ್ಲಿಗ್ ನಿಜಾಮುದ್ದೀನ್ ಧಾರ್ಮಿಕ ಸಭೆಯಿಂದ ಮಾರ್ಚ್ 19 ರಂದು ವಾಪಸ್ಸು ಆಗಿದ್ದ ವ್ಯಕ್ತಿಯ ಕುಟುಂಬದಲ್ಲಿ ಕಾಣಿಸಿಕೊಂಡ ಎರಡನೇ ಪ್ರಕರಣ ಇದಾಗಿದೆ.ಅತ್ತೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೊಸೆ ಮತ್ತು ಮಗ, ಮೊಮ್ಮಕ್ಕಳ ವೈದ್ಯಕೀಯ ತಪಾಸಣೆ ಆರೋಗ್ಯ ಇಲಾಖೆ ಕೈಗೊಂಡಿತ್ತು.ಇದೀಗ ಸೊಸೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೊಸೆಯನ್ನು ಕಲಬುರಗಿಯ ಇ ಎಸ್ ಐ ಆಸ್ಪತ್ರೆಗೆ ದಾಖಲಿಸಲಾಗಿದೆ.ಸೋಂಕಿತೆಯ ಮಕ್ಕಳು ಮತ್ತು ಗಂಡ ನೇರ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಇನ್ನು, ಸೋಂಕಿತ 175, ಕಲಬುರಗಿಯ 57 ವರ್ಷದ ಪುರುಷನಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿದೆ.