ಬಿಹಾರ ಕಾರ್ಮಿಕನಿಂದ ಮತ್ತೆ ನಾಲ್ವರಿಗೆ ಕೊರೋನಾ: ಒಟ್ಟು 13 ಮಂದಿಗೆ ಸೋಂಕು

ಬೆಂಗಳೂರು, ಏ.24, ಬಿಹಾರ ಮೂಲದ ಕಾರ್ಮಿಕನೊಬ್ಬನಿಂದಲೇ ಹೊಂಗಸಂದ್ರದಲ್ಲಿ ಒಂದೇ ದಿನ ಬರೋಬ್ಬರಿ 13 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ನಗರದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.ಆತನಿಗೆ ಸೋಂಕು ಹೇಗೆ ತಗುಲಿದೆ ಎಂಬುದು ಇನ್ನು ಕೂಡ ನಿಗೂಢವಾಗಿದೆ. ಬಿಹಾರ  ಮೂಲದ ಕಾರ್ಮಿಕ ಬೊಮ್ಮನಹಳ್ಳಿ ವ್ಯಾಪ್ತಿಯ ಹೊಂಗಸಂದ್ರದಲ್ಲಿ ವಾಸಿಸುತ್ತಿದ್ದ. ಈತ  ನಮ್ಮ ಮೆಟ್ರೋ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ. ಈತನಿಂದ ಇದುವರೆಗೆ 13 ಮಂದಿಗೆ ಕೊರೊನಾ  ಹಬ್ಬಿರುವ ಶಂಕೆ ವ್ಯಕ್ತವಾಗಿದೆ.ಈ ಹಿನ್ನೆಲೆಯಲ್ಲಿ ನಿನ್ನೆ ಇಡೀ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದ್ದು, ಈತ  ವಾಸಿಸುತ್ತಿದ್ದ ವಿದ್ಯಾಜ್ಯೋತಿ ನಗರದಲ್ಲಿ ರಸ್ತೆ, ಅಂಗಡಿ, ಮನೆಗಳನ್ನು ಬಂದ್  ಮಾಡಲಾಗಿದೆ. ಬಿಹಾರ ಮೂಲದ ಈ ಕಾರ್ಮಿಕ ಹೊಂಗಸಂದ್ರದಲ್ಲಿ ಉಳಿದ 13 ಮಂದಿಯ ಒಟ್ಟಿಗೆ  ವಾಸವಾಗಿದ್ದ. ಅಲ್ಲದೇ ಬಿಬಿಎಂಪಿ ನೀಡಿದ್ದ ಆಹಾರದ ಕಿಟ್‍ನಿಂದ 150 ಮಂದಿ ಒಟ್ಟಿಗೆ  ಅಡುಗೆ ಮಾಡುತ್ತಿದ್ದರು. ಈತನ ಸಂಪರ್ಕದಲ್ಲಿದ್ದ 150  ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಈ ಕಾರ್ಮಿಕನಿಗೆ ಕೊರೊನಾ ಹೇಗೆ ಬಂತು  ಎನ್ನುವುದು ರಹಸ್ಯವಾಗಿಬಿಟ್ಟಿದೆ. ಲಾಕ್‍ಡೌನ್‍ಗೂ ಮೊದಲು ಈತ ಬಿಹಾರಕ್ಕೆ ಹೋಗಿಬಂದಿದ್ದ  ಎಂದು ತಿಳಿದುಬಂದಿದೆ. ಈತನಿಂದ ಸೋಂಕಿತರಾದವರು ಪಕ್ಕದ ಮಂಗಮ್ಮನ ಪಾಳ್ಯದಲ್ಲೂ ಕೆಲಸ  ಮಾಡುತ್ತಿದ್ದರು. ಹೀಗಾಗಿ ಈ ಸೋಂಕಿತರ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೆ ಎನ್ನುವ  ಬಗ್ಗೆಯೂ ಬಿಬಿಎಂಪಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿದೆ. ಈತ ಸಂಚರಿಸಿದ್ದ ಆಟೋ ಚಾಲಕ  ಮತ್ತು ಆತನ ಮನೆಯವರನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡಲಾಗಿದೆ. ಆದರೆ ಕೊರೊನಾ ನೆಗೆಟಿವ್ ಬಂದಿದೆ.