ಪತ್ರಕರ್ತ ಸೇರಿ 15 ಜನರಿಗೆ ಕೊರೋನಾ ಸೋಂಕು; ಸೋಂಕಿತರ ಸಂಖ್ಯೆ 489ಕ್ಕೇರಿಕೆ

ಬೆಂಗಳೂರು, ಏ, ಬೆಂಗಳೂರಿನ ಬಿಬಿಎಂಪಿಯ ಕಂಟೈನ್ ಮೆಂಟ್ ವಲಯಕ್ಕೆ ಭೇಟಿ ನೀಡಿದ ಪತ್ರಕರ್ತರೋರ್ವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇವರು ಕರ್ತವ್ಯದ ಮೇರೆಗೆ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕಿನ ಲಕ್ಷಣಗಳು ಕಂಡುಬಂದಿದೆ ಎನ್ನಲಾಗಿದೆ. ಜೊತೆಗೆ, ಬೆಂಗಳೂರಿನ ಹೊಂಗಸಂದ್ರದ ಬಿಹಾರಿ ಮೂಲದ ಕಾರ್ಮಿಕನ ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. 19 ವರ್ಷದ ಯುವತಿ ಸೇರಿ 37,21,17, 28 ವರ್ಷದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಬೆಳಗಾವಿಯ ಹಿರೇಬಾಗೇವಾಡಿಯ ಐದು ಜನರಲ್ಲಿ ಸೋಂಕು ದೃಢಪಟ್ಟಿದೆ.80 ವರ್ಷದ ವೃದ್ಧೆ ಸೇರಿ,  45,38 ವರ್ಷದ ಪುರುಷರ, 55, 42 ಹಾಗೂ 39 ವರ್ಷದ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಆಂಧ್ರಪ್ರದೇಶದ ಹಿಂದೂಪುರ ಮತ್ತು ಅನಂತಪುರಕ್ಕೆ ಪ್ರಯಾಣ ಬೆಳೆಸಿದ ಹಿನ್ನಲೆಯುಳ್ಳ ಚಿಕ್ಕಬಳ್ಳಾಪುರದ 18 ವರ್ಷದ ಯುವಕನಲ್ಲಿ  ಸೋಂಕು ಪತ್ತೆಯಾಗಿದೆ. ಜೊತೆಗೆ, ದಕ್ಷಿಣ ಕನ್ನಡದ ಬಂಟ್ವಾಳ 33 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489ಕ್ಕೇರಿಕೆಯಾಗಿದೆ. 18 ಜನರು ಮೃತಪಟ್ಟಿದ್ದು, 153 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.