ಚಾಮರಾಜನಗರ/ಬೆಂಗಳೂರು, ಜೂ 9,ರಾಜ್ಯದ ಏಕೈಕ ಹಸಿರು ವಲಯವಾಗಿ ಉಳಿದುಕೊಂಡಿದ್ದ ಚಾಮರಾಜನಗರಕ್ಕೆ ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿರುವ ವ್ಯಕ್ತಿಯೋರ್ವನಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.ಮುಂಬೈನಿಂದ ಸಂಬಂಧಿಕರ ಮನೆಗೆ ಆಗಮಿಸಿದ್ದ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಸೋಂಕು ದೃಢಪಟ್ಟಿದೆ. ಅವರೊಂದಿಗೆ ಆಗಮಿಸಿದ ತಾಯಿ ಮತ್ತು ಸಹೋದರನ ಪರೀಕ್ಷಾ ವರದಿ ನೆಗೆಟೀವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಹಿತಿ ನೀಡಿದ್ದಾರೆ.ಈ ಮೂವರು ಶುಕ್ರವಾರ ರೈಲಿನಲ್ಲಿ ಬೆಂಗಳೂರಿಗೆ ಆಗಮಿಸಿದ್ದು, ಅಲ್ಲಿಂದ ಕಾರಿನ ಮೂಲಕ ಹನೂರು ತಾಲ್ಲೂಕಿನ ಮಾರ್ಟಳ್ಳಿ ಪಾಲಿಮೇಡುವಿನಲ್ಲಿರುವ ಮನೆಗೆ ಬಂದಿದ್ದರು ಎಂದು ಅವರು ಮಾಹಿತಿ ನೀಡಿದರು.ಜಿಲ್ಲೆಯೊಳಗಿನ ಯಾರಿಗೂ ಸೋಂಕುತಗುಲಿಲ್ಲವಾದ್ದರಿಂದ ಜಿಲ್ಲೆಯನ್ನು ಹಸಿರು ವಲಯವೆಂದೇ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.