ಬೀದರ್‌ನಲ್ಲಿ ವೀಸಾ ನಿಯಮ ಉಲ್ಲಂಘಿಸಿದ ಕಿರ್ಗಿಸ್ತಾನ್‍ನ ಎಂಟು ಪ್ರಜೆಗಳ ವಿರುದ್ಧ ಪ್ರಕರಣ ದಾಖಲು

ಬೀದರ್, ಏಪ್ರಿಲ್ 7, ವೀಸಾ ನಿಯಮಗಳ ಉಲ್ಲಂಘನೆ ಮತ್ತು ಜಿಲ್ಲೆಯಲ್ಲಿ ಇಸ್ಲಾಮಿಕ್ ಮಿಷನರಿ ಚಟುವಟಿಕೆಗಳಲ್ಲಿ ತೊಡಗಿದ್ದ ಎಂಟು ಕಿರ್ಗಿಸ್ತಾನ್ ಪ್ರಜೆಗಳ ವಿರುದ್ಧ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ. ಕೊವಿದ್‍ -19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕ್ವಾರಂಟೈನ್‍(ಸಂಪರ್ಕತಡೆ)ನಲ್ಲಿ ಇರಿಸಲಾಗಿದ್ದ ಎಂಟು ಕಿರ್ಗಿಸ್ತಾನ್ ಪ್ರಜೆಗಳ ವಿರುದ್ಧ ವೀಸಾ ನಿಯಮಗಳ ಉಲ್ಲಂಘನೆ ಮತ್ತು ಜಿಲ್ಲೆಯಲ್ಲಿ ಇಸ್ಲಾಮಿಕ್ ಮಿಷನರಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್ ತಿಳಿಸಿದ್ದಾರೆ.
ಮಾರ್ಚ್ 10 ರಂದು ತಾಷ್ಮಾತೊವ್ ಟಿಲೆಕ್ ಮತ್ತು ಅನರಲೀವ್ ಬೆಗಾಲಿ ಸೇರಿದಂತೆ ಎಂಟು ಕಿರ್ಗಿಸ್ತಾನ್ ಪ್ರಜೆಗಳು ಇಲ್ಲಿಗೆ ಬಂದು ನಗರದ ಮಸೀದಿಗಳಲ್ಲಿ ಕೆಲವು ದಿನಗಳ ಕಾಲ ತಂಗಿದ್ದರು. ಇಸ್ಲಾಮಿಕ್ ಮಿಷನರಿ ಚಟುವಟಿಕೆಗಳನ್ನು ನಡೆಸಲು ಇವರು ಒಡಿಶಾದ ಕೆಲ ಜನರ ಸಹಾಯವನ್ನು ಪಡೆದಿದ್ದರು ಎಂದು ನಾಗೇಶ್‍ ತಿಳಿಸಿದ್ದಾರೆ. ಈ ವಿದೇಶಿಯರನ್ನು ರತ್ಕಲ್ಪುರ ಮಸೀದಿ ಬಳಿಯಿರುವ ಅತಿಥಿ ಗೃಹದಲ್ಲಿ ಸಂಪರ್ಕತಡೆಯಲ್ಲಿರಿಸಲಾಗಿದೆ ಎಂದು ನಾಗೇಶ್ ಹೇಳಿದ್ದಾರೆ.ಕಿರ್ಗಿಸ್ತಾನ್ ರಾಯಭಾರ ಕಚೇರಿಗೆ ಅವರ ಚಟುವಟಿಕೆಗಳು ಮತ್ತು ಅವಧಿ ಮೀರಿ ದೇಶದಲ್ಲಿ ತಂಗಿರುವ ಬಗ್ಗೆ ಮಾಹಿತಿ ನೀಡಲಾಗುವುದು. ಈ ಕುರಿತ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.