ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳೆಂದು ವರದಿ ಬಂದರು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ

Government not taking action against port companies for poor sprinkler pipes

ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳೆಂದು ವರದಿ ಬಂದರು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ 

ವಿಜಯಪುರ 16: ರಾಜ್ಯದ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸುತ್ತಿರುವ ಸ್ಪ್ರಿಂಕ್ಲರ್ ಪೈಪ್‌ಗಳ ಗುಣಮಟ್ಟದಲ್ಲಿ ಸಂಪೂರ್ಣ ವಿಫಲವಾಗಿದ್ದು ಕಳಪೆ ಆಗಿವೆ ಎಂದು ಸಿಪೆಟ್‌ದಿಂದ ವರದಿ ಬಂದರು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ತಯಾರಿಸಿದ ಕಂಪನಿಯವರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಇದನ್ನು ಗಮನಿಸಿದರೆ ಕಂಪನಿಯವರೊಂದಿಗೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಿಲಾಪೆ ಆಗಿದ್ದಾರೆಂದು ಸ್ಪಷ್ಟವಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಆರೋಪಿಸಿದ್ದಾರೆ.  

ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ಗುರುವಾರದಂದು ಹಮ್ಮಿಕೊಂಡಿದ್ದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 2 ವರ್ಷಗಳಿಂದ ಹೋರಾಟ ಮಾಡುತ್ತಾ ಬರಲಾಗಿದ್ದು. ಹೋರಾಟವನ್ನು ಗಮನಿಸಿದ ಕೃಷಿ ಇಲಾಖೆಯ ಆಯುಕ್ತರು ಸ್ಪ್ರಿಂಕ್ಲರ್ ಪೈಪ್‌ಗಳನ್ನು ತಪಾಸಣೆಗೆ ಕಳುಹಿಸಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ವಿವಿಧ ಕಂಪನಿಗಳ ಸ್ಪ್ರಿಂಕ್ಲರ್ ಪೈಪ್‌ಗಳ ಮಾದರಿಯನ್ನು ಕಲೆ ಹಾಕಿ ಗುಣಮಟ್ಟ ತಪಾಸಣೆಗೆ ಸಿಪೆಟ್‌ಗೆ ಕಳುಹಿಸಿದ್ದರು. ಒಟ್ಟು ವಿಜಯಪುರ ಜಿಲ್ಲೆಯಲ್ಲಿ ವಿವಿಧ 8 ಕಂಪನಿಗಳು ತಯಾರಿಸಿದ್ದ ಸ್ಪ್ರಿಂಕ್ಲರ್ ಪೈಪ್‌ಗಳ ಮಾದರಿಯನ್ನು ಕಳುಹಿಸಿದ್ದರು. ಅದರಲ್ಲಿ 4 ಕಂಪನಿಗಳ ಸ್ಪ್ರಿಂಕ್ಲರ್ ಪೈಪ್‌ಗಳು ಕಳಪೆ ಮಟ್ಟದ್ದಾಗಿವೆ. ಉಳಿದ 4 ಕಂಪನಿಯಲ್ಲಿ ತಯಾರಿಸಿದ್ದ ಸ್ಪ್ರಿಂಕ್ಲರ್ ಪೈಪ್‌ಗಳು ಗುಣಮಟ್ಟದ್ದಾಗಿವೆ ಎಂದು ವರದಿ ಬಂದಿದೆ ಎಂದು ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವರದಿ ಏನೆಂಬುದನ್ನು ನಮಗೆ ಕೊಟ್ಟಿಲ್ಲಾ. ಬಂದ ವರದಿಯನ್ನು ರೈತ ಮುಖಂಡರಿಗೆ ಒದಗಿಸಿರಿ ಎಂದು ಹೇಳಿದರು ಕೂಡಾ ನಮಗೆ ವರದಿ ನೀಡಿಲ್ಲ.  

ಮೇಲಾಧಿಕಾರಿಗಳಿಗೆ ಕಳುಹಿಸಿದ ನಂತರ ಅವರ ಅನುಮತಿ ಪಡೆದು ತಮಗೆ ಸಿಪೆಟ್ ವರದಿ ಕೊಡಲಾಗುವುದು ಎಂದು ಸಬೂಬು ಹೇಳುತ್ತಿದ್ದಾರೆ. ಇವರ ವಿಳಂಬ ನೀತಿ ಗಮನಿಸಿದರೆ ಉದ್ದೇಶ ಪೂರ್ವಕವಾಗಿ ಸತ್ಯಾಂಶವನ್ನು ಹೊರಗೆ ಹಾಕಬಾರದೆಂಬ ಹುನ್ನಾರ ನಡೆದಿದೆ ಹೇಗೆ ಎಂದು ಅನುಮಾನಾಸ್ಪದವಾಗಿದೆ. ಕೇಂದ್ರ ಸರ್ಕಾರದ ಕೋಟ್ಯಾಂತರ ಹಣ ದುರಪಯೋಗವಾಗುತ್ತಿದ್ದರು ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಇಲ್ಲಿ ಬೆಲಿಯೇ ಎದ್ದು ಹೊಲ ಮೇಯ್ದಂತೆಯಾಗುತ್ತಿದೆ. ರಾಜ್ಯದಲ್ಲಿ ವಿತರಿಸಿದ ಎಲ್ಲ ಕಂಪನಿಗಳ ಸ್ಪ್ರಿಂಕ್ಲರ್ ಪೈಪ್‌ಗಳು ಸಂಪೂರ್ಣ ಕಳಪೆಯಾಗಿವೆ. ಸ್ಪ್ರಿಂಕ್ಲರ್ ಪೈಪ್‌ಗಳ ಗುಣಮಟ್ಟ ತಪಾಸಣೆಗೆ ಮಾದರಿ ಸಂಗ್ರಹಿಸಿದ ನಂತರ ರೈತ ಮುಖಂಡರು ಹಾಗೂ ರೈತರನ್ನೊಳಗೊಂಡಂತೆ ಸಿಪೆಟ್‌ನ ಲ್ಯಾಬ್‌ನಲ್ಲಿ ರೈತರ ಸಮಕ್ಷಮ ತಪಾಸಣೆ ನಡೆಸಬೇಕೆಂದು ತಿಳಿಸಿದ್ದರು ಗಣನೆಗೆ ತೆಗೆದುಕೊಳ್ಳದೆ ಸಿಪೆಟ್‌ಗೆ ಸ್ಪ್ರಿಂಕ್ಲರ್ ಪೈಪ್‌ಗಳ ಮಾದರಿ ಕಳುಹಿಸಿ ಲ್ಯಾಬ್ ಟೆಸ್ಟ್‌ ಮಾಡಿಸಿದ್ದಾರೆ. 8 ಸ್ಪ್ರಿಂಕ್ಲರ್ ಪೈಪ್‌ಗಳ ಮಾದರಿಗಳ ಪೈಕಿ 4 ಸ್ಪ್ರಿಂಕ್ಲರ್ ಪೈಪ್‌ಗಳ ಕಂಪನಿಗಳ ಮಾದರಿ ಪೈಪ್‌ಗಳು ಕಳಪೆಯಾಗಿವೆ ಎಂದು ಉಳಿದ 4 ಕಂಪನಿಗಳ ಮಾದರಿ ಪೈಪ್‌ಗಳು ಗುಣಮಟ್ಟದ್ದಾಗಿವೆ ಎಂದು ವರದಿ ಕಳುಹಿಸಿ ಕಣ್ಣೊರೆಸುವ ತಂತ್ರಗಾರಿಕೆ ಮಾಡಲಾಗಿದೆ. ಕಂಪನಿಯವರು ಲ್ಯಾಬ್ ಟೆಸ್ಟಗಾಗಿಯೇ ಪ್ರತ್ಯೇಕ ಗುಣಮಟ್ಟದ ಸ್ಪ್ರಿಂಕ್ಲರ್ ಪೈಪ್‌ಗಳನ್ನು ತಯಾರಿಸಿ ಇರಿಸಿರುತ್ತಾರೆ.  

ಇಂತಹ ಸಂದರ್ಭ ಬಂದರೆ ಗುಣಮಟ್ಟದ ಸ್ಪ್ರಿಂಕ್ಲರ್ ಪೈಪ್‌ಗಳನ್ನು ತಪಾಸಣೆಗಾಗಿ ಸಿಪೆಟ್‌ಗೆ ಕಳುಹಿಸುತ್ತಾರೆ. ರೈತರಿಗೆ ವಿತರಿಸಿದ ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ಇಲಾಖೆ ಅಧಿಕಾರಿಗಳು ಲ್ಯಾಬ್ ಟೆಸ್ಟಗಾಗಿ ಸಂಗ್ರಹಿಸಿದ ಮಾದರಿಗಳನ್ನು ಪಕ್ಕಕ್ಕೆ ಇರಿಸುತ್ತಾರೆ. ಇದರಿಂದ ಹೊರಗಿರುವ ಹೋರಾಟಗಾರರು ಹಾಗೂ ರೈತರಿಗೆ ಗೊತ್ತಾಗಲು ಹೇಗೆ ಸಾಧ್ಯವಿದೆ. ಇದರಲ್ಲಿ  ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳ ಕೈವಾಡವಿದೆ. ಈ ರೀತಿ ಮಾಡುವ ಮೋಸದಿಂದಾಗಿ ಸರ್ಕಾರದ ಸಾವಿರಾರು ಕೋಟಿ ಹಣ ದುರುಪಯೋಗವಾಗುತ್ತಿದೆ. ಹಾಗೂ ರೈತರಿಗೂ ಮೋಸವಾಗುತ್ತಿದೆ. ಒಮ್ಮೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ವಿತರಣೆ ಮಾಡಿದರೆ ಸಾಮಾನ್ಯ ರೈತರಿಗೆ ಜೀವನ ಪರ್ಯಂತ ಸ್ಪ್ರಿಂಕ್ಲರ್ ಪೈಪ್‌ಗಳನ್ನು ವಿತರಿಸುವುದಿಲ್ಲ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ. ಇಡೀ ರಾಜ್ಯಾದ್ಯಂತ ಎಲ್ಲ ಕಂಪನಿಗಳು ಕೂಡಾ ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ತಯಾರಿಸಿ ರೈತರಿಗೆ ಮೋಸ ಮಾಡಿ ಕಂಪನಿಯವರು ಕೋಟ್ಯಾಂತರ ಹಣ ಲೂಟಿ ಮಾಡಿದ್ದಾರೆ ಇದರಿಂದ ಕೇಂದ್ರ ಸರ್ಕಾರದ ಮಹಾತ್ವಾಂಕಾಕ್ಷಿ ಯೋಜನೆ ಹಳ್ಳ ಹಿಡಿದಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕುರಿತು ಗಂಬೀರವಾಗಿ ಪರಿಗಣಿಸಿ ತಪ್ಪಿತಸ್ತ ಕಂಪನಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು. ಮತ್ತೆ ಅಂತಹವರ ಕಂಪನಿಯ ಹೆಸರಿಟ್ಟು ಬೇರೆ ಪೈಪ ತಯಾರಿಸಲು ಅನುಮತಿ ನೀಡಬಾರದೆಂದು ಅಖಂಡ ಕರ್ನಾಟಕ ರೈತ ಸಂಘ ಒತ್ತಾಯಿಸುತ್ತದೆ. 

ಈ ವೇಳೆ ಮುಖಂಡರಾದ ಪ್ರಹ್ಲಾದ ನಾಗರಾಳ, ರಾಮನಗೌಡ ಪಾಟೀಲ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ರಾಜೇಸಾ ನದಾಫ, ಸಂಗಪ್ಪ ಟಕ್ಕೆ, ಜಯಸಿಂಗ ರಜಪೂರ, ಆತ್ಮಾನಂದ ಭೈರೊಡಗಿ, ಸೋಮು ಬಿರಾದಾರ, ಬಸವರಾಜ ನ್ಯಾಮಗೊಂಡ, ಜಕರಾಯ ಪೂಜಾರಿ, ಸೇರಿದಂತೆ ಇತರರು ಇದ್ದರು.