ಕಾನಹೊಸಹಳ್ಳಿ: ಲಾರಿ ಡಿಕ್ಕಿ ಇಬ್ಬರ ಸಾವು

ಕಾನಹೊಸಹಳ್ಳಿ 21: ಸಮೀಪದ ಇಮಾಡಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ಬೆಳಗ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ  ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇಮಾಡಪುರ ಗ್ರಾಮದ ಆನಂದ (28) ಜಗದೀಶ್ (55) ಮೃತರು. ಗಾಯಗೊಂಡ ಟ್ರ್ಯಕ್ಟರ್ನಲ್ಲಿದ್ದ ಓಬಳೇಶ್ ಹಾಗೂ ಲಾರಿ ಚಾಲಕ ಶ್ರೀಶೈಲ, ಕ್ಲೀನರ್ ಶ್ರೀಕಾಂತರನ್ನು ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ. ಇಮಾಡಪುರದಿಂದ ಟ್ರ್ಯಕ್ಟರ್ನಲ್ಲಿ ಮೂವರು ರಾಗಿ ಹುಲ್ಲು ತುಂಬಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾನಹೊಸಹಳ್ಳಿ ಮಾರ್ಗವಾಗಿ ಸಂಬಂಧಿಕರ ಊರಿಗೆ ಹೋಗುತ್ತಿದ್ದರು. ಈ ವೇಳೆ ಕೂಡ್ಲಿಗಿ ಕಡೆಯಿಂದ ಬಂದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಲಾರಿ ಚಾಲಕನ ನಿರ್ಲಕ್ಷೃವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಘಟನೆ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಶಿವಕುಮಾರ್, ಕಾನಹೊಸಹಳ್ಳಿ ಪಿಎಸ್ ಎಚ್.ನಾಗರಾಜ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.