ರಾಜ್ಯದಲ್ಲಿ ಭರಣಿ ಮಳೆ: ರೈತ ಸಮುದಾಯದಲ್ಲಿ ಸಂತ; ಮೂರು ದಿನ ಮತ್ತೆ ಮಳೆ ಸಂಭವ

ಬೆಂಗಳೂರು, ಏ.29,ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಮೂರು ದಿನಗಳ ರಾಜ್ಯದ ಹಲವೆಡೆ ಕಾಲ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಹಗುರದಿಂದ ಸಾಧಾರಣಾ ಮಳೆ ಮುಂದುವರಿಯಲಿದೆ ಎಂದು  ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.ನಿನ್ನೆ  ರಾತ್ರಿ ಹಾಗೂ ಇಂದು ಮುಂಜಾನೆ ಬೆಂಗಳೂರಿನಲ್ಲಿ ಭಾರಿ ಮಳೆಯಾದ ವರದಿಯಾಗಿದೆ. ಬೆಂಗಳೂರು ಸೇರಿದಂತೆ  ಕೆಲವು ಜಿಲ್ಲೆಗಳಲ್ಲಿ ಮುಂಜಾನೆಯಿಂದಲೂ ಎಡೆಬಿಡದೆ ಧಾರಾಕಾರ ಮಳೆ ಸುರಿದಿದೆ.ಭರಣಿ  ಮಳೆ ಬಿದ್ದಿದ್ದರಿಂದ ರೈತ ಸಮುದಾಯದಲ್ಲಿ ಸಂತಸ ಮೂಡಿದೆ. ಬಿಸಿಲಿನ ಬೇಗೆಯಿಂದ  ಬಸವಳಿದಿದ್ದ ಜನರಿಗೆ ತಂಪೆರೆದಂತಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ,  ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ  ಪ್ರಮಾಣದ ಭಾರಿ ಮಳೆಯಾದ ವರದಿಯಾಗಿದೆ.
ಬೆಂಗಳೂರಿನ ಬಹುತೇಕ  ಎಲ್ಲಾ ಬಡಾವಣೆಗಳಲ್ಲಿ ಇಂದು ಮುಂಜಾನೆಯಿಂದಲೇ  ನಿರಂತರವಾಗಿ ಮಳೆ ಬಿದ್ದಿದೆ. ಕೋಲಾರ  ಚಿಕ್ಕಬಳ್ಳಾಪುರ ರಾಮನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಜಿಟಿಜಿಟಿ ಮಳೆಯಾಗಿದೆ. ಕಳೆದ  ವಾರವೂ ಇದೇ ರೀತಿ ಸುಳಿಗಾಳಿಯ ಪರಿಣಾಮ ಬೆಳ್ಳಂ ಬೆಳಗ್ಗೆ ಮಳೆಯಾಗಿತ್ತು. ಇಂದು  ಬೆಳ್ಳಗೆಯೂ ಹಲವು ಕಡೆಗಳಲ್ಲಿ ಗುಡುಗು-ಸಿಡಿಲು, ಮಿಂಚಿನಿಂದ ಕೂಡಿದ ಸುರಿಮಳೆಯಾಗಿದೆ.  ಬೆಂಗಳೂರಿನ  ರಸ್ತೆಗಳು ನೀರಿನಿಂದ ತುಂಬಿದ್ದು ಕಾಲುವೆಗಳಂತಾಗಿದ್ದವು.ವಾತಾವರಣದಲ್ಲಿ  ಮೂರ್ನಾಲ್ಕು ರೀತಿಯ ಬದಲಾವಣೆಗಳಾಗಿದ್ದು, ರಾಜ್ಯದ ಒಳನಾಡಿನಲ್ಲಿ ಉತ್ತಮ  ಮಳೆಯಾಗುತ್ತಿದೆ.
ಬಂಗಾಳ ಕೊಲ್ಲಿ,  ಅರಬ್ಬೀ ಸಮುದ್ರಗಳಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಅಂಡೋಮಾನ್, ನಿಕೋಬರ್ ನಲ್ಲಿ  ವಾಯುಭಾರ ಕುಸಿತ ಉಂಟಾಗಿದೆ. ಅಲ್ಲದೆ, ಮಧ್ಯಪ್ರದೇಶದಿಂದ ತಮಿಳುನಾಡಿನವರೆಗೂ ಟ್ರಪ್  ನಿರ್ಮಾಣವಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ. ಇನ್ನೂ ಮೂರು  ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಬೆಂಗಳೂರು ಸೇರಿದಂತೆ ದಕ್ಷಿಣ  ಒಳನಾಡಿನ ಜಿಲ್ಲೆಗಳಲ್ಲಿ ಸರಾಸರಿ 40-65 ಮಿ.ಮೀ.ನಷ್ಟು ಮಳೆಯಾಗಿದೆ ಎಂದರು. ಕರ್ನಾಟಕ  ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ  ಜಿಲ್ಲಾವಾರು ಗರಿಷ್ಠ  ಪ್ರಮಾಣದ ಮಳೆ ಬಿದ್ದ ವಿವರ (ಮಿ.ಮೀ): ಬೆಂಗಳೂರು ನಗರ-110,  ತುಮಕೂರು, ಬೆಂಗಳೂರು  ಗ್ರಾಮಾಂತರ-107, ರಾಮನಗರ-66, ಚಿಕ್ಕಬಳ್ಳಾಪುರ -82, ಮೈಸೂರು-120, ಚಾಮರಾಜನಗರ-102,  ಕೊಡಗು-46, ಚಿಕ್ಕಮಗಳೂರು-58, ಮಂಡ್ಯ-94ಮಿ.ಮೀನಷ್ಟು ಮಳೆಯಾಗಿದ್ದು, ಉಳಿದಂತೆ ರಾಜ್ಯದ  ಒಳನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ.