ಲೋಕದರ್ಶನ ವರದಿ
ಬಳ್ಳಾರಿ 09: ಸಂಶೋಧನೆಗಳು ಜನ ಹಿತಕ್ಕೆ ಪೂರಕವಾಗಿರಬೇಕು. ಎಲ್ಲರ ಕಲ್ಯಾಣದಲ್ಲಿ ನಮ್ಮ ಕಲ್ಯಾಣವಿದೆ. ನಮಗೆ ಉತ್ತಮ ಅಂಶಗಳು ಯಾವ ಭಾಷೆಯಿಂದ ದೊರೆತರು ಅದನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕು. ಭಾರತೀಯ ಭಾಷೆಗಳಾದ ಕನ್ನಡ ಮತ್ತು ಸಂಸ್ಕೃತಗಳು ಪರಸ್ಪರ ಪೂರಕವಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿವೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ.ಸ.ಚಿ.ರಮೇಶ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಮಗ್ರ ದಾಸ ಸಾಹಿತ್ಯ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಸಂಸ್ಕೃತ ಸಾಹಿತ್ಯ: ಅನುಸಂಧಾನದ ನೆಲೆಗಳು ಎಂಬ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಲಸವೆಂಬ ಧರ್ಮಕ್ಕೆ ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲ. ಹಾಗಾಗಿ ಕಾರ್ಯ ಧರ್ಮಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು. ಭಾರತೀಯ ಸಂಸ್ಕೃತಿಯಲ್ಲಿ ವಿಜ್ಞಾನ ಮತ್ತು ಮಾನವಿಕ ವಿಷಯಗಳು ಎರಡು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ನಮ್ಮ ಶಿಕ್ಷಣ ಪದ್ಧತಿಯಲ್ಲಿ ಕಲೆ ಮತ್ತು ವಿಜ್ಞಾನವನ್ನು ಒಟ್ಟಿಗೆ ಸೇರಿಸುವ ಕೆಲಸವಾಗಬೇಕಿದೆ. ಸಂಶೋಧಕರು ಯಾವುದೇ ವಿಷಯವನ್ನು ಟೀಕಿಸುವಾಗ ಅದನ್ನು ಸಂಪೂರ್ಣವಾಗಿ ತಿಳಿದಿರಬೇಕು ಎಂದು ಸಲಹೆ ನೀಡಿದರು.
ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಜಿ.ಎನ್.ಭಟ್ ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಒಂದಕ್ಕೊಂದು ಪೂರಕವಾಗಿವೆ. ಎರಡು ಭಾಷೆಗಳ ನಡುವೆ ಸಮನ್ವಯ, ಸಾಮರಸ್ಯ ಸಂಬಂಧವನ್ನು ಕಾಣಬಹುದು. ಸಮಾಜದಲ್ಲಿ ಸಮಭಾವ, ಸಮಚಿತ್ತದಲ್ಲಿ ಬದುಕುವುದಕ್ಕೆ ಕನ್ನಡ ಮತ್ತು ಸಂಸ್ಕೃತದ ಸಂಬಂಧ ಬೇಕು ಎಂದರು. ಬಹುತ್ವ ಸಂಸ್ಕೃತಿಯ ಬಗ್ಗೆ ಮಾತನಾಡುವಾಗ ಏಕತ್ವವನ್ನು ನಿರಾಕರಣೆ ಮಾಡುವುದು ಸರಿಯಲ್ಲ. ಇತಿಹಾಸ ಪುರಾಣವೂ ಆಗುತ್ತದೆ, ಕಾವ್ಯವೂ ಆಗುತ್ತದೆ. ಎಲ್ಲದಕ್ಕೂ ಕಿವಿ ಕೊಡುವ, ತೆರೆದುಕೊಳ್ಳುವ ಮನಸ್ಥಿತಿ ಇರಬೇಕು. ಕನ್ನಡ ಮತ್ತು ಸಂಸ್ಕೃತದ ಬಗ್ಗೆ ವಿಶ್ಲೇಷಣೆ ಸೂಕ್ತ ಅದರಿಂದ ಅನ್ವೇಷಣೆಯಾಗಬೇಕೇ ಹೊರತು ವಿಘಟನೆಯಾಗಬಾರದು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಅನಂತ ನಾಗೇಂದ್ರ ಭಟ್ ಅವರು ಮಾತನಾಡಿ ಪ್ರಸ್ತುತದಲ್ಲಿ ನಡೆಯುತ್ತಿರುವ ಕೆಲವೊಂದಷ್ಟು ಸಂಶೋಧನೆಗಳು ಪ್ರಯೋಜನಕ್ಕಿಲ್ಲದವಾಗಿವೆ. ಇಂತಹ ಸಂಶೋಧನೆಗಳಿಂದ ಸಂಶೋಧನೆ ಮಾಡುವ ಸಂಶೋಧಕರಿಗೂ ಮತ್ತು ಇತರರಿಗೂ ಪ್ರಯೋಜನವಿಲ್ಲ. ಸಾಹಿತ್ಯಕ್ಕಾಗಿ ಸಾಹಿತ್ಯವಲ್ಲ, ಸಂಶೋಧನೆಗಾಗಿ ಸಾಹಿತ್ಯ. ಆದ್ದರಿಂದ ನಾವು ಕೈಗೊಳ್ಳುವ ಕೆಲಸ, ಕಾರ್ಯ, ಸಂಶೋಧನೆ ಉಪಯೋಗಕಾರಿಯಾಗಿರಬೇಕು. ಪ್ರಾಚೀನ ಸಾಹಿತ್ಯದಲ್ಲಿ ಶಬ್ಧ ಪ್ರಧಾನ ಸಾಹಿತ್ಯ, ಅರ್ಥ ಪ್ರಧಾನ ಸಾಹಿತ್ಯ ಮತ್ತು ಧ್ವನಿ ಪ್ರಧಾನ ಸಾಹಿತ್ಯ ಎಂದು ಗುರುತಿಸಬಹುದು. ಶಿಲ್ಪಶಾಸ್ತ್ರ, ವಾಸ್ತುಶಾಸ್ತ್ರ, ಅಷ್ಠಾಂಗ ಯೋಗದ ಬಗ್ಗೆ ಸರಿಯಾದ ಸಂಶೋಧನೆಯಾಗಿಲ್ಲ, ಈ ಬಗ್ಗೆ ಹೆಚ್ಚು ಸಂಶೋಧನೆಗಳ ಅವಶ್ಯಕತೆ ಇದೆ ಎಂದರು. ಯಾವ ವ್ಯಕ್ತಿ ಯಾವ ಕೆಲಸವನ್ನು ಮಾಡಬೇಕು ಅದನ್ನೇ ಮಾಡಬೇಕು. ಸಾಮಥ್ರ್ಯವಿಲ್ಲದಿದ್ದರೆ, ಅವನನ್ನು ಸಮರ್ಥನಾಗಿ ಮಾಡಬೇಕು. ಪ್ರತಿಯೊಬ್ಬರು ಮಾಡುವ ಕೆಲಸವನ್ನು ಜವಾಬ್ದಾರಿಯಿಂದ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಅವರು ಸ್ವಾಗತಿಸಿದರು. ಸಮಗ್ರ ದಾಸ ಸಾಹಿತ್ಯ ಅಧ್ಯಯನ ಕೇಂದ್ರದ ಸಂಚಾಲಕರಾದ ಡಾ. ಮಲ್ಲಿಕಾರ್ಜನ ವಣೇನೂರು ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳಾದ ಪ್ರೊ. ಗಿರೀಶ್ ಚಂದ್ರ, ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.