ಲೋಕದರ್ಶನ ವರದಿ
ಬಳ್ಳಾರಿ 09: ಸಾಲದ ವ್ಯವಹಾರಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕೂಡ್ಲಿಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ಬಿ.ವೆಂಕಟೇಶ್ ನಾಯ್ಕನನ್ನು ಪೊಲೀಸರು ಕೂಡಲೇ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹಲ್ಲೆಗೊಳಗಾದ ಕೂಡ್ಲಿಗಿ ತಾಪಂ ಮಾಜಿ ಸದಸ್ಯ ಕೆ.ಕೊಟ್ರೇಶ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಮೂಲಕ ಖಾಸಗಿ ಕಂಪನಿಯೊಂದರಿಂದ 2 ಲಕ್ಷ ರೂ. ಬೀಜ ಖರೀದಿಸಿದ್ದ ನಾನು ಅದರ ಹಣವನ್ನು ವಾಪಸ್ ನೀಡುವಲ್ಲಿ ವಿಳಂಬವಾಗಿತ್ತು. ಈ ವೇಳೆ ಬಿ.ವೆಂಕಟೇಶ್ ನಾಯ್ಕ್ ಅವರು, ತಮಿಳುನಾಡಿನ ಖಾಸಗಿ ಕಂಪನಿಯಲ್ಲಿನ ನಿನ್ನ 2 ಲಕ್ಷ ರೂ. ಸಾಲವನ್ನು ನಾನು ತೀರಿಸುತ್ತೇನೆ. ಬಳಿಕ ಮಳೆಯ ಅಭಾವ, ಬೋರ್ವೆಲ್ಗಳಲ್ಲಿ ಅಂತರ್ಜಲಮಟ್ಟ ಕುಸಿದ ಹಿನ್ನೆಲೆಯಲ್ಲಿ ಉತ್ತಮ ಬೆಳೆಯೂ ಬೆಳೆಯಲಾಗದೆ, ನನ್ನ ಸಾಲವನ್ನು ತೀರಿಸಿದ್ದ ವೆಂಕಟೇಶ್ ನಾಯ್ಕನಿಗೆ 2 ಲಕ್ಷ ರೂ. ಸಾಲವನ್ನೂ ತೀರಿಸಲಾಗಿಲ್ಲ. ಇದರಿಂದ ವೆಂಕಟೇಶ್ ನಾಯ್ಕ್ ಅವರು ಸಹ ಕಳೆದ 2018ರಲ್ಲಿ ಕೂಡ್ಲಿಗಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಚೆಕ್ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ತೀರ್ಪುಗೆ ನಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ರೈತರು ಬೆಳೆದಿದ್ದ ಶೇಂಗಾ ಬೆಳೆಯನ್ನು ಖರೀದಿಸಿ, ಮೋಹನ್ ಎಂಟರ್ಪ್ರೈಸಸ್ಗೆ ಮಾರಾಟ ಮಾಡಿದ್ದೆ. ಶೇಂಗಾ ಬೆಳೆಗೆ ಸಂಬಂಧಿಸಿದ್ದ ಒಂದು ಲಕ್ಷ ರೂ. ಹಣವನ್ನು ಕಂಪನಿಯ ಮೋಹನ್ಜೀ ಎನ್ನುವವರು ಕಳೆದ ಜ.3 ರಂದು ಕೊಟ್ಟೂರು ಪಟ್ಟಣದ ಎಸ್ಬಿಐ ಬ್ಯಾಂಕ್ನಲ್ಲಿ ನೀಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಬ್ಯಾಂಕ್ಗೆ ಬಂದ ವೆಂಕಟೇಶ್ ನಾಯ್ಕ್, ಹಣವನ್ನು ಕಸಿದುಕೊಂಡು ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಲಿಂದ ನಿಂದಿಸಿ, ತನ್ನ ಬೂಟ್, ಬೆಲ್ಟ್ ಕಿತ್ತು ಹಲ್ಲೆ ನಡೆಸಿದ್ದಾರೆ. ಜತೆಗೆ ಕೊಲೆ ಮಾಡುವುದಾಗಿಯೂ ಬೆದರಿಕೆಯೊಡ್ಡಿದ್ದಾನೆ. ಈ ಕುರಿತಂತೆ ಕೂಡಲೇ ಸ್ಥಳೀಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಾಗಿದ್ದರೂ, ಈ ವರೆಗೂ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಪೊಲೀಸರು ಕೂಡಲೇ ಅವರನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕೊಟ್ರೇಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗೌಡರ ಶಂಕರಪ್ಪ, ಸಿದ್ದಲಿಂಗಪ್ಪ ನಾಗೇಶ್ ಸೇರಿದಂತೆ ಇತರರಿದ್ದರು.