ಲೋಕದರ್ಶನ ವರದಿ
ಬಳ್ಳಾರಿ 22: ಜಾಗತಿಕ ಮಟ್ಟದಲ್ಲಿ ಭಾರಿ ಚಚರ್ೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ ಈಗ ರಾಜ್ಯದ ಭತ್ತ ಬೆಳೆಗಾರರಿಗೂ ತಟ್ಟಿದೆ! ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದಿಂದ ಕೊಲ್ಲಿ ರಾಷ್ಟ್ರಗಳಿಗೆ ಅಕ್ಕಿ ರಫ್ತು ಸ್ಥಗಿತವಾಗಿದ್ದು, ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿ, ತುಂಗಭದ್ರಾ ಜಲಾಶಯ ತುಂಬಿದ್ದರಿಂದ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಇರಾನ್-ಅಮೆರಿಕ ಬಿಕ್ಕಟ್ಟು ಆಘಾತ ನೀಡಿದೆ. ಜನವರಿ ಮೊದಲ ವಾರದಲ್ಲಿ ಇರಾನ್ ಸೇನೆಯ ಕಮಾಂಡರ್ನನ್ನು ಅಮೆರಿಕ ಹತ್ಯೆ ಮಾಡಿದ್ದರಿಂದ ಎರಡೂ ದೇಶಗಳ ನಡುವೆ ಯುದ್ಧಾತಂಕ ತಲೆದೋರಿತ್ತು. ಇದಾದ ಬಳಿಕ ಅರಬ್ ದೇಶಗಳಿಗೆ ಭಾರತದಿಂದ ಅಕ್ಕಿ ರವಾನೆ ಸ್ಥಗಿತಗೊಂಡಿದೆ.
ಪ್ರತಿ ವರ್ಷ ಜನವರಿಯಿಂದ ಜೂನ್ವರೆಗೆ ಅರಬ್ ದೇಶಗಳಿಗೆ ಅಕ್ಕಿ ರವಾನಿಸಲಾಗುತ್ತದೆ. ಇಲ್ಲಿನ ಭತ್ತವನ್ನು ಖರೀದಿದಾರರು ಖರೀದಿಸಿದ ನಂತರ ಅಂತಾರಾಷ್ಟ್ರೀಯ ಒಪ್ಪಂದದಂತೆ ಗುಜರಾತ್ನ ಮುಂದ್ರಾ ಬಂದರು ಮೂಲಕ ಇರಾನ್ನ ಚಾಬಹಾರ್ ಬಂದರಿಗೆ ಕಳಿಸಲಾಗುತ್ತದೆ. ಇರಾನ್ ತಲುಪಿದ ನಂತರ ಇತರ ಅರಬ್ ದೇಶಗಳಿಗೆ ಅಕ್ಕಿ ರವಾನೆಯಾಗುತ್ತದೆ. ಆದರೆ, ಯುದ್ಧದ ಭೀತಿಯಿಂದ ಕಳೆದ 15 ದಿನದಿಂದ ರಫ್ತು ನಿಂತಿದೆ. 2019ರಲ್ಲಿ 32,800 ಕೋಟಿ ರೂ. ಮೌಲ್ಯದ ಬಾಸುಮತಿ ಅಕ್ಕಿಯನ್ನು ಅರಬ್ ದೇಶಗಳಿಗೆ ಭಾರತ ರಫ್ತು ಮಾಡಿತ್ತು.
ಬೆಲೆಯಲ್ಲಿ ಭಾರಿ ಇಳಿಕೆ:
ಮಾರುಕಟ್ಟೆಯಲ್ಲಿ ಅಕ್ಕಿ ದರ ಕುಸಿತ ಕಂಡಿದೆ. ಬಾಸುಮತಿ ಪ್ರತಿ ಕೆಜಿಗೆ 60- 70 ರೂ.ವರೆಗೆ ಸದ್ಯ ಮಾರಾಟವಾಗುತ್ತಿದೆ. ಯುದ್ಧ ಭೀತಿಗೂ ಮೊದಲು 120 ರಿಂದ 140 ರೂ.ವರೆಗೆ ಮಾರಾಟವಾಗುತ್ತಿತ್ತು ಎನ್ನುತ್ತಾರೆ ವ್ಯಾಪಾರಿಗಳು. ಒಂದು ಕ್ವಿಂಟಲ್ ಭತ್ತ ಕಳೆದ ವರ್ಷ ಈ ದಿನದಲ್ಲಿ 3,600 ರಿಂದ 3,800 ರೂ.ವರೆಗೆ ಮಾರಾಟವಾಗುತ್ತಿತ್ತು. ಆದರೆ, ಸದ್ಯ ಮಾರುಕಟ್ಟೆಯಲ್ಲಿ 3,100 ರಿಂದ 3,200 ರೂ. ಇದೆ. ಮುಂಗಾರಿನಲ್ಲಿ ಬಳ್ಳಾರಿ ತಾಲೂಕಿನಲ್ಲಿ 30 ಸಾವಿರ ಹೆಕ್ಟೇರ್, ಸಿರಗುಪ್ಪ 24 ಸಾವಿರ ಹೆಕ್ಟೇರ್ ಮತ್ತು ಕಂಪ್ಲಿ ತಾಲೂಕಿನಲ್ಲಿ 13 ಸಾವಿರ ಹೆಕ್ಟೇರ್ನಲ್ಲಿ ಭತ್ತ ಕಟಾವು ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ಬಳ್ಳಾರಿ, ಕಂಪ್ಲಿ ಮತ್ತು ಹೊಸಪೇಟೆ, ಕೊಪ್ಪಳ ಜಿಲ್ಲೆಯ ಗಂಗಾವತಿ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತದೆ.