ಅಧ್ಯಯನ ಆಯಸ್ಸನ್ನು ಹೆಚ್ಚಿಸುತ್ತದೆ. ಸಾಧನೆಗೆ ಮನಸ್ಸು ಬೇಕು : ಡಾ. ಸಂಗಮೇಶ ಕಲ್ಯಾಣಿ
ಹಂಪಿ 07: ಅಧ್ಯಯನದ ವಿಷಯಕ್ಕೆ ಬಂದಾಗ ಅಸಾಧ್ಯ ಎಂಬ ಶಬ್ದಕ್ಕೆ ವಿದ್ಯಾರ್ಥಿಗಳು ಸ್ಥಾನ ಕೊಡಬಾರದು ನಿರಂತರ ಕಲಿಕೆಯು ನಮ್ಮನ್ನು ಅತ್ಯುತ್ತಮ ಸಂಶೋಧಕರನ್ನಾಗಿ ತಯಾರು ಮಾಡುತ್ತದೆ. ಇಂದು ರಾಷ್ಟ್ರೀಯ ಸಂಶೋಧನ ವೇದಿಕೆ, ಮುಧೋಳದ ಗೌರವಾಧ್ಯಕ್ಷರಾದ ಡಾ. ಸಂಗಮೇಶ ಕಲ್ಯಾಣಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗವು ದಿನಾಂಕ 6ನೇ ಜನವರಿ 2025ರಂದು ತಮ್ಮ ವಿಭಾಗದಲ್ಲಿ ತಾಳೆಗರಿ ಮತ್ತು ತಾಮ್ರ ಪತ್ರಗಳ ತಯಾರಿಕೆ ಮತ್ತು ಲೇಖನಿ ನನ್ನ ಅನುಭವ ಮತ್ತು ಆಯುರ್ವೇದ ಹಸ್ತಪ್ರತಿಗಳ ಪ್ರಯೋಜನಗಳು ಕುರಿತು ಏರಿ್ಡಸಿದ್ದ ವಿಶೇಷ ಉಪನ್ಯಾಸಗಳಲ್ಲಿ ಮಾತನಾಡಿದರು.
ದಾನಿಗಳಿಂದ ಹಣ ಸಂಗ್ರಹಿಸಿ ಅದರಿಂದ 18 ಗೇಜಿನ ತಾಮ್ರ ಪಟಗಳನ್ನು ತಯಾರಿಸಿಕೊಂಡು ತಾಮ್ರ ಪಟದ ಮೇಲೆ ತಾವೇ ತಯಾರಿಸಿಕೊಂಡ ಟೂಲ್ಸ್ ಲೇಖನಿಯಿಂದ ಲಿಪಿ ಕೆತ್ತಿದ ರನ್ನನ ಗದಾಯುದ್ಧ ಕಾವ್ಯದ ತಾಮ್ರ ಪಟವನ್ನು ಪ್ರದರ್ಶಿಸಿದರು. ಒಟ್ಟು 200 ತಾಮ್ರ ಪಟಗಳಲ್ಲಿ ಕೆತ್ತಿರುವ ರನ್ನನ ಗದಾಯುದ್ಧ ಕೃತಿಯು ಇತಿಹಾಸದಲ್ಲಿ ಸೂರ್ಯ ಚಂದ್ರರಿರುವ ತನಕ ಅಮರವಾಗಿರುತ್ತದೆ. ನಂತರ ಅದನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸುತ್ತೇನೆ. ಲಿಪಿಕಾರನಿಗೆ ಇಂತಹ ಪ್ರಯತ್ನ ಬಹಳ ಮುಖ್ಯ ಎಂದು ತಿಳಿಸುತ್ತಾ, ಈ ಸಂದರ್ಭದಲ್ಲಿ ತಾಳೆ ಎಲೆಗಳನ್ನು ಬರೆಯಲು ತಾಳೆಗರಿ ಆಗಿಸಬೇಕಾದರೆ ಅದರ ಸಂಸ್ಕರಣ ವಿಧಾನವನ್ನು ಎಳೆ ಎಳೆಯಾಗಿ ವಿವರಿಸಿದರು. ಇದರ ಮೇಲೆ ಬರೆಯಲು ಎಳೆ ಬಿಸಿಲು ಸೂಕ್ತ ಸಮಯ. ತಾಳೆಗರಿಯ ಮೇಲೆ ಬರೆಯಲು ಹಾಗೂ ತಾಮ್ರ ಪಟದ ಮೇಲೆ ಕೆತ್ತಲು ಅಪಾರ ತಾಳ್ಮೆ ಬೇಕು. ಕಣ್ಣಿನ ದೃಷ್ಟಿ, ಉಸಿರಾಟ ಪೂರಕವಾಗುತ್ತದೆ. ಈ ಸಂದರ್ಭದಲ್ಲಿ ಹೃದಯಕ್ಕೆ ಆಗುವ ಒತ್ತಡವನ್ನು ತಡೆಯಲು ಪ್ರಾಣಾಯಾಮ ಮಾಡಲೇಬೇಕು. ಕಣ್ಣಿಗಾಗಿ ತ್ರಾಟಕ ಆಸನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ವಿವರಿಸಿ ಪ್ರಾಯೋಗಿಕವಾಗಿ ತಿಳಿಸಿದರು.
ನಂತರ ಆಯುರ್ವೇದ ಹಸ್ತಪ್ರತಿಗಳ ಪ್ರಯೋಜನಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾದ ಬಳ್ಳಾರಿಯ ವೈದ್ಯ ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡುತ್ತ, ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿರುವ ತಾಳೆಗರಿಯ ಹಸ್ತಪ್ರತಿಗಳು ನಾನು ವೈದ್ಯನಾಗುವಲ್ಲಿ ಅಧ್ಯಯನ ಮಾಡಲು ಪ್ರೇರೇಪಿಸಿವೆ. ಹಸ್ತಪ್ರತಿಗಳಲ್ಲಿ ವೈದ್ಯಕೀಯ ಶಾಸ್ತ್ರಗಳಿವೆ. ಹಸ್ತಪ್ರತಿಗಳ ಅಧ್ಯಯನದಿಂದ ವೈದ್ಯರಾಗಬಹುದು, ತ್ರಿಕಾಲಜ್ಞಾನಿಗಳಾಗಬಹುದು, ಸಮಸ್ಯೆಗಳನ್ನು ಬಗೆಹರಿಸಬಲ್ಲ ಮಾಂತ್ರಿಕರಾಗಬಹುದು, ವಿಜ್ಞಾನಿಗಳಾಗಬಹುದು. ಇಂತಹ ಆಯ್ಕೆ ವಿದ್ಯಾರ್ಥಿಗಳ ಮುಂದೆ ಇದೆ. ಆರೋಗ್ಯಕ್ಕೆ ಸಂಬಂಧಪಟ್ಟ ಕೋಟಿ ಬೆಲೆಬಾಳುವ ಆರೋಗ್ಯದ ಆಯುರ್ವೇದ ಸೂತ್ರಗಳು ಹಸ್ತಪ್ರತಿಗಳಲ್ಲಿವೆ. ರಾಜಕ್ಷಯ(ಏಡ್ಸ್) ರೋಗ, ಕ್ಯಾನ್ಸ್‌ರ್, ಬಂಜೆತನ, ಫಲವಂತಿಕೆ, ಮೆಡಿಸಿನ್ ರಿಯಾಕ್ಷನ್, ಆಧುನಿಕ ಕಾಲದ ಪಿಸಿಓಡಿ ಅಲ್ಲದೇ ಕೊರಾನ ವೈರಸ್‌ಗೆ ಸಂಬಂಧಪಟ್ಟಂತೆ ಆಯುರ್ವೇದ ಹಸ್ತಪ್ರತಿಗಳಲ್ಲಿ ಗಿಡಮೂಲಿಕೆಯ ಪರಿಹಾರಗಳಿವೆ. ನಾನು ಇಲ್ಲಿರುವ ಹಸ್ತಪ್ರತಿಗಳನ್ನು ಅಧ್ಯಯನ ಮಾಡಿ ವೈದ್ಯನಾಗಿ ಈ ಎಲ್ಲ ರೋಗಗಳಿಗೆ ಮದ್ದು ನೀಡಿ ಗುಣಪಡಿಸಿದ್ದೇನೆ. ನಿಮ್ಮ ವಿಶ್ವವಿದ್ಯಾಲಯದಲ್ಲಿ ವಿಫುಲವಾದ ಗಿಡಮೂಲಿಕೆಗಳಿವೆ. ವಿದ್ಯಾರ್ಥಿಗಳೆಲ್ಲರೂ ವಿಷ ವೈದ್ಯ ಪದ್ಧತಿಯನ್ನು ಅಗತ್ಯವಾಗಿ ಕಲಿಯಬೇಕಾಗಿದೆ. ಇದರಿಂದ ಪ್ರಥಮ ಚಿಕಿತ್ಸೆ ನೀಡಲು ಪ್ರಯೋಜನ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹಸ್ತಪ್ರತಿಗಳ ಅಧ್ಯಯನಕ್ಕೆ ಪ್ರೇರೇಪಣೆ ನೀಡಿ ಗಿಡಮೂಲಿಕೆಗಳನ್ನು ಪ್ರದರ್ಶಿಸಿದರು. ಇಂತಹ ಹಸ್ತಪ್ರತಿಗಳಲ್ಲಿರುವ ಬೆಲೆಬಾಳುವ ವಿದ್ಯೆಗಳನ್ನು ಮುನ್ನೆಲೆಗೆ ತರಲು ಆಗುತ್ತಿಲ್ಲ ಎಂದು ವಿಷಾದಿಸಿದರು. ಹಸ್ತಪ್ರತಿಗಳಲ್ಲಿರುವ ವಿಷವೈದ್ಯ ಪದ್ಧತಿ ಇಂತಹ ಅನೇಕ ವಿಷಯಗಳ ಮೇಲೆ ಡಿಪ್ಲೊಮಾ ಕೋರ್ಸ್‌ನ್ನು ಕನ್ನಡ ವಿಶ್ವವಿದ್ಯಾಲಯ ಮಾಡಿದರೆ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ಮಾನ್ಯ ಕುಲಪತಿಯವರಿಗೆ ಅವರ ಅನುಪಸ್ಥಿತಿಯಲ್ಲಿ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಅವರು ಆಯುರ್ವೇದ ಹಸ್ತಪ್ರತಿಗಳು ಅಜ್ಞಾನ ಅಲ್ಲ, ಮೌಢ್ಯ ಅಲ್ಲ, ನಮ್ಮ ಹಿರಿಯ ಅನುಭವದಿಂದ ಬಂದ ಶಾಸ್ತ್ರ. ಸಾಹಿತ್ಯ ಮೂಢನಂಬಿಕೆಯನ್ನು ಕಲಿಸುವುದಿಲ್ಲ, ವೈಚಾರಿಕತೆಯನ್ನು ಕಲಿಸುತ್ತದೆ. ನಮ್ಮ ಸಂಸ್ಕೃತಿ, ನಮ್ಮ ಸಂಶೋಧನೆ, ನಮ್ಮ ತತ್ತ-್ವಜ್ಞಾನ, ತಂತ್ರಜ್ಞಾನ ಎಲ್ಲವನ್ನು ಇಂದಿನ ಓದು ಅಲ್ಲಗಳೆಯುತ್ತಿದೆ. ಸಾಂಪ್ರದಾಯಿಕ ವಿಜ್ಞಾನವನ್ನು ಮೇಲೆ ತರುವ ಕಲ್ಪನೆ ಕಂಬಾರ ಅವರಿಗಿತ್ತು. ಶಾಸ್ತ್ರಗಳ ಅಧ್ಯಯನ ವಿಧಾನವನ್ನು ಹುಡುಕುವ ಕೆಲಸ ಕನ್ನಡ ವಿಶ್ವವಿದ್ಯಾಲಯ ಮಾಡುತ್ತಿದೆ. ನಾವು ಮಾಡುವ ಸಂಶೋಧನೆಗಳು ಸಮಾಜಕ್ಕೆ, ಜನ ಸಮುದಾಯಕ್ಕೆ ಎಷ್ಟು ಉಪಯೋಗವಾಗುತ್ತಿವೆ ಎಂಬುದು ಬಹಳ ಮುಖ್ಯ ಎಂದು ತಿಳಿಸುತ್ತ ತಾಳೆಗರಿಯನ್ನು ಸಸ್ಯಸಂಕುಲವಾಗಿ ಮಾಡುವ ಯೋಜನೆಯನ್ನು ಜಾರಿಗೆ ತರಲು ಇಂದು ನಾ. ಡಿಸೋಜ ಅವರ ನಿಧನದ ಪ್ರಯುಕ್ತ ಅವರ ಗೌರವಾರ್ಥ ಆವರಣದಲ್ಲಿ ಮಾನ್ಯ ಕುಲಪತಿಯವರಿಂದ ತಾಳೆ ಗಿಡವನ್ನು ನೆಡಲಾಗಿದೆ ಎಂದು ತಾಳೆಗಿಡದ ಮಹತ್ವವನ್ನು ತಿಳಿಸಿದರು.
ವಿದ್ಯಾರ್ಥಿಗಳಾದ ಗೋಣಿಬಸಪ್ಪ ನಿರೂಪಿಸಿದರು, ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಬಿ.ಸತೀಶ ವಂದಿಸಿದರು. ವಿಶೇಷ ಉಪನ್ಯಾಸದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಾಧ್ಯಾಪಕರಾದ ಡಾ.ಎಫ್.ಟಿ.ಹಳ್ಳಿಕೇರಿ, ಡಾ.ಚನ್ನವೀರ್ಪ ಹಾಗೂ ಮಾಹಿತಿಕೇಂದ್ರದ ಡಾ.ಡಿ.ಮೀನಾಕ್ಷಿ ಅವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಿಬ್ಬರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.