ಲೋಕದರ್ಶನ ವರದಿ
ಬಳ್ಳಾರಿ 12: ಬುದ್ಧ, ಬಸವಾದಿ ಶರಣರು ಹಾಗೂ ಅಂಬೇಡ್ಕರ್ ತತ್ವಾದರ್ಶಗಳು ಸುಖ ಸಮೃದ್ಧಿ ಜೀವನಕ್ಕೆ ಪೂರಕ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ(ಐಜಿಪಿ) ಎಂ.ನಂಜುಂಡಸ್ವಾಮಿ ತಿಳಿಸಿದರು.
ನಗರದಲ್ಲಿ ಬೆಂಗಳೂರಿನ ಮನಂ ಅಭಿಮಾನಿ ಬಳಗ ಹೊರತಂದಿರುವ 'ನಾವೆಲ್ಲಾ ಭಾರತೀಯರು' ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಬುದ್ಧನ ಮಾರ್ಗ, ಬಸವಾದಿ ಶರಣರ ವಚನಗಳು ಹಾಗೂ ಅಂಬೇಡ್ಕರ್ ಕಾನೂನಾತ್ಮಕ ಧರ್ಮದ ಆಚರಣೆಗಳು ದೇಶದ ಹತ್ತು ಹಲವು ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬಲ್ಲವು ಎಂದು ಅಭಿಪ್ರಾಯಪಟ್ಟರು.
ವಿಶ್ವದಲ್ಲೇ ಅತ್ಯುತ್ತಮ ಸಂವಿಧಾನವೆಂಬ ಹೆಗ್ಗಳಿಕೆ ಹೊಂದಿರುವ ಭಾರತದ ಸಂವಿಧಾನದಲ್ಲಿ ಎಲ್ಲಾ ಜಾತಿ, ಧರ್ಮ, ಭಾಷಿಕರು ಸಾಮರಸ್ಯ, ಭಾವೈಕ್ಯತೆಯಿಂದ ಬದುಕಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಸರಿಯಾಗಿ ಸಂವಿಧಾನ ಅರಿತುಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಕೊಪ್ಪಳದ ಸಾದಿಕ್ ಅಲೀ ಅವರು, ಮಾದರಿ ಪೊಲೀಸ್ ಅಧಿಕಾರಿ ಮನಂ ಅವರ ನಾವೆಲ್ಲಾ ಭಾರತೀಯರು, ನಮ್ಮೆಲ್ಲರ ಧರ್ಮ ಭಾರತೀಯ ಧರ್ಮ, ನಮ್ಮ ಧರ್ಮಗ್ರಂಥ ಭಾರತದ ಸಂವಿಧಾನ ಎಂಬ ಘೋಷವಾಕ್ಯ ದೇಶದ ಜನತೆ ಭಾವೈಕ್ಯ, ಸಾಮರಸ್ಯದಿಂದ ಬದುಕಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಕನರ್ಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.ಮಂಜುನಾಥ, ದೇಶದ ಎಲ್ಲಾ ಸಮುದಾಯದ ಜನರ ಜೀವನವನ್ನು ಉತ್ತಮ ಪಡಿಸಿದ್ದು ಭಾರತದ ಸಂವಿಧಾನ. ಜಾತಿ ಭೇದ, ಲಿಂಗ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನವಾದ ಹಕ್ಕು ನೀಡಿರುವ ಸಂವಿಧಾನವನ್ನು ನಾವು ಸರಿಯಾಗಿ ಓದಿಕೊಂಡಿಲ್ಲ ಎಂದು ವಿಷಾಧಿಸಿದರು.
ಸಂವಿಧಾನ ನಮಗೆ ತಾಯಿಯಿದ್ದಂತೆ. ಸಂವಿಧಾನ ರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದರು.
ಪರಿಸರವಾದಿ ಸಂತೋಷ್ ಮಾರ್ಟನ್ ಮಾತನಾಡಿ ಮನಂ ಅವರ ಆಶಯಗಳ ಘೋಷ ವಾಕ್ಯವನ್ನು ಮನೆ ಮನೆಗೆ ಮುಟ್ಟಿಸಲು ಅಭಿಯಾನ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಆರತಿ ತಿಪ್ಪಣ್ಣ, ಸಿದ್ದಣ್ಣ ಅಮ್ದಿಹಾಳ್, ಅನಿಲ್ ಕುಮಾರ್ ಬೇಗಾರ್, ಶೇಖರಪ್ಪ ಕುರುವಳ್ಳಿ, ಬೆಂಗಳೂರು, ಕೊಪ್ಪಳ, ಇಳಕಲ್, ಗಂಗಾವತಿ ಮತ್ತಿತರ ಊರುಗಳ ಮನಂ ಅಭಿಮಾನಿಗಳು ಉಪಸ್ಥಿತರಿದ್ದರು.
ಬೆಂಗಳೂರಿನ ಮಾಳವ ಮುನಿರಾಜು ಸ್ವಾಗತಿಸಿದರು. ರಾಕೇಶ್, ಮಾಳವ ಗಣೇಶ್, ಮಾಳವ ಮಂಜುನಾಥ್ ನಿರ್ವಹಿಸಿದರು. ದಸಂಸ (ಭೀಮವಾದ) ಜಿಲ್ಲಾ ಸಂಚಾಲಕ ಬೈಲೂರು ಮಲ್ಲಿಕಾರ್ಜುನ ವಂದಿಸಿದರು.