ಬಳ್ಳಾರಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಮನಸೆಳೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಬಳ್ಳಾರಿ 01: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ಬೆಳಗ್ಗೆ ಏರ್ಪಡಿಸಿದ್ದ ತಾಯಿ ಭುವನೇಶ್ವರಿ ಬೃಹತ್ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷ ಡಾ.ಜೆ.ಎಂ.ನಾಗಯ್ಯ ಅವರ ಮೆರವಣಿಗೆಯು ನಗರದ ಸಾಂಸ್ಕೃತಿಕ ಸಮುಚ್ಛಯದ ಆವರಣದಲ್ಲಿರುವ ಕನ್ನಡ ಭವನದಿಂದ ಆರಂಭವಾಯಿತು. ಮೆರವಣಿಗೆಗೆ ಶಾಸಕ ಜಿ.ಸೋಮಶೇಖರರೆಡ್ಡಿ ಚಾಲನೆ ನೀಡಿದರು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಸಮ್ಮೇಳನಾಧ್ಯಕ್ಷ ಡಾ.ಜೆ.ಎಂ.ನಾಗಯ್ಯ ಹಾಗೂ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಪುಷ್ಪಾರ್ಚನೆ ಮಾಡಿ ನಮಿಸಿದರು. ಸಮ್ಮೇಳನಾಧ್ಯಕ್ಷ ಡಾ.ಜೆ.ಎಂ.ನಾಗಯ್ಯ ಅವರಿಗೆ ಆರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದರಾಮ ಕಲ್ಮಠ, ಶಾಸಕ ಸೋಮಶೇಖರರೆಡ್ಡಿ ಅವರು ಸಾರೋಟದಲ್ಲಿ ಸಾಥ್ ನೀಡಿದರು. ನಂತರ ಅವರ ಧರ್ಮಪತ್ನಿ ಮೆರವಣಿಗೆಯಲ್ಲಿ ಜತೆಯಾದರು.

ಮೆರವಣಿಗೆಯಲ್ಲಿ ಡೊಳ್ಳು ಕಲಾತಂಡ,ಕೋಲಾಟ ತಂಡ, ಅಲೆಮಾರಿ ಕಲಾವಿದರ,ಡೊಳ್ಳುಕುಣಿತ, ಜಾನಪದ ಕಲೆಗಳ ಕುಣಿತ, ನಂದಿಕೋಲು ಕುಣಿತ,ಗೊರವರ ಕುಣಿತ, ಹಲಗೆ ವಾದನ, ತಾಷಾರಾಂಡೋಲು ಸೇರಿದಂತೆ 15ಕ್ಕೂ ಹೆಚ್ಚು ಕಲಾತಂಡಗಳ ಪ್ರದರ್ಶನ ಗಮನಸೆಳೆಯಿತು.

 ಮೆರವಣಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಅಸಂಖ್ಯಾತ ಕನ್ನಡ ಮನಸ್ಸುಗಳು ಉತ್ಸಾಹದಿಂದ ಪಾಲ್ಗೊಂಡಿದ್ದಿದು ವಿಶೇಷವಾಗಿತ್ತು. ಇದಕ್ಕೂ ಮುಂಚೆ ಜೋಳದರಾರಿ ದೊಡ್ಡನಗೌಡ ರಂಗಮಂದಿರದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಎಸಿ ರಮೇಶ ಕೋನರೆಡ್ಡಿ, ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದರಾಮ ಕಲ್ಮಠ, ನಾಡಧ್ವಜಾರೋಹಣವನ್ನು  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ರಂಗಣ್ಣನವರ್ ಅವರು ನೆರವೇರಿಸಿದರು.