ಬಳ್ಳಾರಿ: ನಮ್ಮ ಮೆಚ್ಚಿನ ಪುಸ್ತಕ ಸ್ಪರ್ಧೆ

ಲೋಕದರ್ಶನ ವರದಿ

ಬಳ್ಳಾರಿ 28: ಪ್ರಸ್ತುತ ದಿನಗಳಲ್ಲಿ ಮೊಬೈಲ್ನಿಂದಾಗಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರವು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದ್ದು, ವಿವಿಧ ಪ್ರಕಾರಗಳ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸದ ಅಭಿರುಚಿಯನ್ನು ವಿದ್ಯಾರ್ಥಿ  ದೆಸೆಯಿಂದಲೇ ಬೆಳೆಸಿಕೊಳ್ಳಬೇಕೆಂದು ಗಂಗಾವತಿಯ ಕೊಲ್ಲಿನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಜಾಜಿ ದೇವೇಂದ್ರಪ್ಪ ತಿಳಿಸಿದರು. 

ಸ್ಥಳೀಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ, ಜಾಣಜಾಣೆಯರ ಬಳಗ ಹಾಗೂ ಕನ್ನಡ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ "ನಮ್ಮ ಮೆಚ್ಚಿನ ಪುಸ್ತಕ ಸ್ಪರ್ದೇ  ಅಂಗವಾಗಿ  ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ, ಪುಸ್ತಕ ಓದುವುದು ಒಳ್ಳೆಯ ಹವ್ಯಾಸವಾಗಿದೆ. ಕನ್ನಡ ಸಾಹಿತ್ಯದಲ್ಲಿ ಪಂಪನಿಂದ ಹಿಡಿದು ಆಧುನಿಕ ಕಾಲದವರೆಗೆ ಸಾಕಷ್ಟು ಸಾಹಿತ್ಯ ಕೃತಿಗಳು ಪ್ರಕಟಗೊಂಡಿವೆ. ಅವುಗಳಲ್ಲಿ ಉತ್ತಮ ಕೃತಿಗಳನ್ನು ಆಯ್ಕೆ ಮಾಡಿಕೊಂಡು ಓದಬೇಕು ಎಂದರು. 

ಕನ್ನಡ ಸಾಹಿತ್ಯದಲ್ಲಿ ರಸ ಉದ್ದೀಪನಗೊಳಿಸುವಂತಹ ಅನೇಕ ಕೃತಿಗಳು ಇವೆ. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯದಲ್ಲಿ ಮನುಷ್ಯನ ಮನಪರಿವರ್ತನೆ ಮಾಡುವಂತಹ ಕೃತಿಗಳಿವೆ ಎಂದರಲ್ಲದೆ, ಕುವೆಂಪು ಅವರು ರಚಿಸಿದ ಮಲೆಗಳಲ್ಲಿ ಮಧುಮಗಳು, ಕಾನೂರು ಹೆಗ್ಗಡತಿ, ಶೂದ್ರತಪಸ್ವಿ, ಶ್ರೀರಾಮಾಯಣದರ್ಶನಂ ಕೃತಿಗಳನ್ನು ಸೋದಾಹರಣವಾಗಿ ವಿಶ್ಲೇಷಿಸಿ ಕೃತಿಗಳ ಮಹತ್ವನ್ನು ತಿಳಿಸಿದರು. 

ಮಲೆಗಳಲ್ಲಿ ಮಧುಮಗಳು ಕೃತಿಯಲ್ಲಿ ಕುವೆಂಪು ಅವರು ಪ್ರಪ್ರಥಮ ಬಾರಿಗೆ ಆಧುನಿಕತೆಯ ಸ್ಪರ್ಶವನ್ನು ನೀಡಿದ್ದಾರೆ. ಭಾರತಕ್ಕೆ ಹೇಗೆ ಆಧುನಿಕತೆಯ ಗಾಳಿ ಬೀಸಿತು. ಸೈಕಲ್ ಬಳಕೆಯಾದ ಕುರಿತು ಮಲೆನಾಡಿನಲ್ಲಿ ಆದ ಬದಲಾವಣೆಯನ್ನು ವಿಶ್ಲೇಷಿಸಿ ವಿದ್ಯಾಥರ್ಿಗಳಲ್ಲಿ ಸಾಹಿತ್ಯದ ಕುರಿತು ಇರುವ ಹಲವು ಮಗ್ಗಲುಗಳನ್ನು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮಕಲ್ಮಠ ಅವರು ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗಿ ಅಲ್ಲಿ ವಿವಿಧ ಪುಸ್ತಕಗಳನ್ನು ಓದಬೇಕು. ಪ್ರಪಂಚದಲ್ಲಿ ಎತ್ತರದ ಮಟ್ಟದ ಬೆಳೆದ ಎಲ್ಲಾ ಗಣ್ಯರೆಲ್ಲರೂ ಪುಸ್ತಕಗಳಿಂದಲೇ ಜ್ಞಾನವೃದ್ಧಿಸಿಕೊಂಡು ಜ್ಞಾನಸೂರ್ಯರಾಗಿದ್ದಾರೆ.  ಅಂಬೇಡ್ಕರ್, ಕುವೆಂಪು, ಬೇಂದ್ರೆ ಸೇರಿದಂತೆ ಎಲ್ಲ ಗಣ್ಯರು ಗ್ರಂಥಾಲಯದಿಂದಲೇ ಬೆಳೆದವರು ಎಂದು ಹೇಳಿದರು. 

ಪ್ರಾಸ್ತಾವಿಕವಾಗಿ ಕನ್ನಡ ವಿಭಾಗದ ಮುಖ್ಯಸ್ಥ ಸಿ.ದೇವಣ್ಣ ಅವರು ಮಾತನಾಡಿ ವಿದ್ಯಾರ್ಥಿಗಳು ಮೊದಲು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವುದಕ್ಕಿಂತ ಮುಂಚಿತವಾಗಿ ಪುಸ್ತಕಗಳನ್ನು ಜೋಡಿಸುವುದನ್ನು ಕಲಿಯಿಸಿ. ಅಲ್ಲಿ ಪುಸ್ತಕಗಳ ಮಹತ್ವ ತಿಳಿದು ಓದಬೇಕು. ಇದರಿಂದ ಓದುವ ಅಭಿರುಚಿ ಬೆಳೆಯುತ್ತದೆ. ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಬರೆದಿದ್ದನ್ನು ಕಳುಹಿಸಿ ಪ್ರಕಟಿಸಿದ ನಂತರ ನಿಮಗಾಗುವ ಆನಂದ ಭಿನ್ನವಾಗಿರುತ್ತದೆ ಎಂದು ಹೇಳಿದರು. 

ವೇದಿಕೆಯ ಮೇಲೆ ಜಾಣ-ಜಾಣೆಯರ ಬಳಗದ ಸಂಚಾಲಕ ಲಿಂಗಪ್ಪ, ಪರೀಕ್ಷಾ ನಿಯಂತ್ರಕರಾದ ಡಾ.ಬಿ.ಶ್ರೀನಿವಾಸಮೂರ್ತಿ  ಉಪಸ್ಥಿತರಿದ್ದರು. 

ಬಹುಮಾನ ವಿತರಣೆ: 

ನಮ್ಮ ಮೆಚ್ಚಿನ ಪುಸ್ತಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕನ್ಯಾಕುಮಾರಿ, ದ್ವಿತೀಯ ಸ್ಥಾನ ಪಡೆದ ಎರ್ರಿಸ್ವಾಮಿ, ತೃತೀಯ ಬಹುಮಾನವನ್ನು ಮೇಘನಾ ಮತ್ತು ಸಿದ್ದರಾಮ ಇವರಿಗೆ ಪ್ರದಾನ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಜಾನಪದ ಸಂಶೋಧಕರಾದ ಡಾ.ಎ.ಎನ್.ಸಿದ್ದೇಶ್ವರಿ,  ಡಾ.ತಿಪ್ಪೇರುದ್ರ ಸಂಡೂರು, ಡಾ.ಕೆ.ಬಸಪ್ಪ, ಮಹಂತೇಶ್, ಡಾ.ಶ್ಯಾಮೂರ್ತಿ, ಮಂಜುನಾಥ, ರಾಮಕೃಷ್ಣ, ಸೋಮಶೇಖರ್,  ಭಾಗವಹಿಸಿದ್ದರು. ಆರಂಭದಲ್ಲಿ ಗಂಗಮ್ಮ ಪ್ರಾರ್ಥಿಸಿದರು. ಸುನೀತಾ ಸ್ವಾಗತಿಸಿದರು. ಸುರೇಶ್ ನಿರೂಪಿಸಿದರು. ಕೊನೆಯಲ್ಲಿ ವಂದಿಸಿದರು.