ಲೋಕದರ್ಶನ ವರದಿ
ಬಳ್ಳಾರಿ 27: ಜಿಲ್ಲೆಯು ಸಾಂಸ್ಕೃತಿಕ ಕಲೆಗಳ ತವರೂರಾಗಿದ್ದು, ಇದನ್ನು ಉಳಿಸಿಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಹಿಂದೆ ರಾಜಾಶ್ರಯದಲ್ಲಿ ಸಾಹಿತ್ಯ, ಕಲೆಯನ್ನು ಪೋಷಣೆ ಮಾಡುವ ಹೊಣೆ ಅರಸರ ಮೇಲಿತ್ತು. ಆದರೆ ಈಗ ನಮ್ಮ ಸರ್ಕಾರ ಬಡ ಕಲಾವಿದರ ನೆರವಿಗೆ ಬರಬೇಕಿದೆ ಎಂದು ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರರೆಡ್ಡಿ ಅಭಿಪ್ರಾಯಪಟ್ಟರು.
ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡವು ಖ್ಯಾತ ಕಲಾವಿದ ಹುಲೆಪ್ಪ ಇವರ ಸ್ಮರಣಾರ್ಥ ಏರ್ಪಡಿಸಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ ಹುಲಿಕುಂಟೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ತೊಗಲುಗೊಂಬೆ ಕಲಾಪ್ರಕಾರವನ್ನು ಇಂದು ಪ್ರದರ್ಶಿಸುವುದು ಬಹಳ ಕಡಿಮೆ. ಇಂತಹ ದೇಶೀ ಕಲೆಗಳು ಅಳವಿನಂಚಿಗೆ ಸಾಗುತ್ತಿದ್ದು, ಇವುಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ಸಮಾಜದಿಂದ ಆಗಬೇಕಿದೆ. ಜಿಲ್ಲೆಯ ಕಲಾವಿದರು ಅನೇಕ ಕಲೆಗಳನ್ನು ಪ್ರದಶರ್ಿಸುತ್ತಿದ್ದು, ಅದರಲ್ಲಿ ಮುಖ್ಯವಾಗಿ ರಾಜ್ಯದಲ್ಲಿಯೇ ತೊಗಲುಗೊಂಬೆ ಕಲಾ ಪ್ರದರ್ಶನಕ್ಕೆ ಬಳ್ಳಾರಿ ಹೆಸರುವಾಸಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಸಂಖ್ಯೆ ಜಿಲ್ಲೆಯಲ್ಲಿ ಅಪಾರವಾಗಿದೆ. ಅವರ ಸಾಧನೆಯನ್ನು ಗುರುತಿಸಿ ಮುಂಚೂಣಿಗೆ ತರುವ ಕೆಲಸ ಸಂಘ ಸಂಸ್ಥೆಗಳಿಂದ ಆದಾಗ ಮಾತ್ರ ಕಲೆ ಸಾಹಿತ್ಯ ಪೋಷಣೆ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿರಗಾನಹಳ್ಳಿ ಶಾಂತನಾಯ್ಕ್ ಅವರು, ಬಹುತೇಕ ಪ್ರದರ್ಶನ ಕಲೆಗಳು ತಳಸಮುದಾಯಕ್ಕೆ ಸೇರಿದವಾಗಿದ್ದು, ಇಂತಹ ಕಲೆಗಳು ಮರೆಯಾಗುತ್ತಿರುವುದು ವಿಷಾದನೀಯ. ಈ ಕಲೆಗಳನ್ನು ಸರ್ಕಾರ ತನ್ನ ಬೆಂಬಲದೊಂದಿಗೆ ಉಳಿಸಬೇಕಾದ ಅನಿವಾರ್ಯತೆ ಇದ್ದು. ಹಳ್ಳಿಗಾಡಿನ ಜೀವಂತ ಕಲೆಗಳನ್ನು ಉಳಿಸುತ್ತಿರುವ ಕಲಾವಿದರಿಗೆ ಜನ ಮನ್ನಣೆ ನೀಡಿ ಗೌರವಿಸಬೇಕಿದೆ ಎಂದರು.
ಸಾಧಕರಿಗೆ ಸನ್ಮಾನ
ಖ್ಯಾತ ತೊಗಲುಗೊಂಬೆ ಕಲಾವಿದ ದಿ.ಹುಲೆಪ್ಪನವರ ಇವರ ಸ್ಮರಣಾರ್ಥ ಹುಲಿಕುಂಟೆ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹೊಸಪೇಟೆ ಚಿತ್ತವಾಡಿಗಿಯ ಸಂಗೀತ ಭಾರತಿ ಅಧ್ಯಕ್ಷ ಹೆಚ್.ಪಿ.ಕಲ್ಲಂಭಟ್, ಖ್ಯಾತ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು, ಕೊಪ್ಪಳದ ಹಿಂದೂಸ್ತಾನಿ ಸಂಗೀತ ಕಲಾವಿದರಾದ ದೊಡ್ಡಯ್ಯ ವಿ.ಕಲ್ಲೂರು, ಬಳ್ಳಾರಿ ರಂಗನಿದರ್ೇಶಕ ಕೆ.ಜಗದೀಶ್, ನಾದಸ್ವರ ಕಲಾವಿದ ಎಂ.ಗುರುಸ್ವಾಮಿ, ಕೋಲಾಟ ಕಲಾವಿದ ವೈ.ದೊಡ್ಡಬಸಪ್ಪ, ಯಡ್ರಾಮನಹಳ್ಳಿ ತೊಗಲುಗೊಂಬೆ ಕಲಾವಿದ ಕೆ.ನಿಂಗಪ್ಪ, ನೃತ್ಯ ಕಲಾವಿದ ಎಸ್.ಕೆ.ಆರ್.ಜಿಲಾನಿಬಾಷ, ಶಿಕ್ಷಕಿ ಈರಮ್ಮ, ಕಪ್ಪಗಲ್ಲಿನ ಹಾರ್ಮೋನಿಯಂ ಚಂದಾವಲಿ ಪಿ.ಅವರನ್ನು ಶಾಸಕ ಸೋಮಶೇಖರೆಡ್ಡಿ ಹುಲಿಕುಂಟೆ ಪ್ರಶಸ್ತಿ ನೀಡಿ ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ ಗಾನಕೋಕಿಲ ದೊಡ್ಡಯ್ಯ ವಿ.ಕಲ್ಲೂರು ಅವರು ಹಿಂದೂಸ್ತಾನಿ ಸಂಗೀತವನ್ನು, ಬಳ್ಳಾರಿಯ ಎರ್ರೆಮ್ಮ ಮತ್ತು ತಂಡ ರಂಗಗೀತೆಗಳನ್ನು ಪ್ರಸ್ತುತ ಪಡಿಸಿತು. ಲಕ್ಷ್ಮ ಕಲಾ ಕ್ಷೇತ್ರದಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಯಿತು. ವಾದ್ಯ ಸಹಕಾರವನ್ನು ಗುಡುದೂರು ರಾಘವೇಂದ್ರ, ಮತ್ತು ಕೆ.ಉಮೇಶ್ ಸಂಡೂರು ಇವರು ನೀಡಿದರು.
ಕಾರ್ಯಕ್ರಮದಲ್ಲಿ ಕೆ.ಎಂ.ಎಫ್. ನಿರ್ದೇಶಕ ವೀರಶೇಖರರೆಡ್ಡಿ, ಹಿರಿಯ ಪತ್ರಕರ್ತ ಎಂ.ಅಹಿರಾಜ್, ಎಸ್.ಮಲ್ಲನಗೌಡ, ಮಹಾನಗರ ಪಾಲಿಕೆಯ ಕನ್ನಡ ಜಾಗೃತಿ ಸಭೆಯ ಸದಸ್ಯ ಚಂದ್ರಶೇಖರ್ ಆಚಾರಿ ಮುಂತಾದವರು ಹಾಜರಿದ್ದರು.
ಆರಂಭದಲ್ಲಿ ಸುಜಾತಮ್ಮ ಪ್ರಾರ್ಥಿಸಿದರು. ಅಮಾತಿ ಬಸವರಾಜ್ ನಿರೂಪಿಸಿದರು. ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡದ ಅಧ್ಯಕ್ಷ ಕೆ.ಹೊನ್ನೂರ್ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.