ಬಳ್ಳಾರಿ: ಅ.21 ರಂದು ಮತದಾನ ನೀತಿ ಸಂಹಿತೆ ಜಾರಿ

ಲೋಕದರ್ಶನ ವರದಿ

ಬಳ್ಳಾರಿ 22: ವಿಜಯನಗರ ಕ್ಷೇತ್ರದ ವಿಧಾನಸಭಾ ಉಪ ಚುನಾವಣೆಗೆ ಮುಂದಿನ ತಿಂಗಳು ಅ.21 ರಂದು ಮತದಾನ ನಡೆಯಲಿದ್ದು, ಇದಕ್ಕಾಗಿ ಬಳ್ಳಾರಿ ಜಿಲ್ಲಾಡಳಿತದಿಂದ ಸಕಲ ಸಿದ್ಧತಯೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಎಸ್.ಎಸ್.ನಕುಲ್ ಹೇಳಿದರು.

     ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರರಂದು ವಿಜಯನಗರ ಕ್ಷೇತ್ರದ ಉಪಚುನಾವಣೆಯ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ನಾಮಪತ್ರವನ್ನು ಸಲ್ಲಿಸಲು ಸೆ.30 ರಂದು ಕೊನೆಯ ದಿನವಾಗಿದ್ದು, ಅ.03 ನಾಮಪತ್ರ ಹಿಂಪಡೆಯಲು ಕಡೆಯ ದಿನ, ಅ.21 ರಂದು ಮತದಾನ ನಡೆಯಲಿದೆ. ಅ.24 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಅ.27ಕ್ಕೆ ಚುನಾವಣಾ ನೀತಿ ಸಂಹಿತೆ ಮುಗಿಯಲಿದೆ ಎಂದರು.

ಗ್ರಾಮೀಣ ಭಾಗದಲ್ಲಿ 63 ಮತಗಟ್ಟೆ ಹಾಗೂ 184 ನಗರ ಸೇರಿದಂತೆ ಒಟ್ಟು 247 ಮತಗಟ್ಟೆ ಸ್ಥಾಪನೆ ಮಾಡಲಾಗುತ್ತದೆ. ವಿಜಯನಗರ ಕ್ಷೇತ್ರದಲ್ಲಿ 115691 ಪುರಷರು, 120400 ಮಹಿಳೆಯರು ಹಾಗೂ ಇತರೆ 63 ತೃತೀಯ ಲಿಂಗಿಗಳು ಇದ್ದಾರೆ. 108 ಜನ ಪೋಸ್ಟಲ್ ಬ್ಯಾಲೇಟ್ ಮೂಲಕ ಮತದಾನ ಮಾಡಲಿದ್ದು ಒಟ್ಟಾರೆ 236154 ಮತದಾರರು ಮತ ಚಲಾಯಿಸಲಿದ್ದಾರೆ

      ಜಿಲ್ಲೆಯಲ್ಲಿ 11 ತಾಲೂಕುಗಳು ಇರುವ ಕಾರಣ ಎಚ್ಕೆಆರ್ಡಿಬಿ ಹಾಗೂ ಇತರೆ ಕಾಮಗಾರಿಗಳು ಜಾರಿಯಲ್ಲಿರುವುದುರಿಂದ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಅನ್ವಯಿಸುವಂತೆ ಮಾತ್ರ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಆದೇಶ ಬಂದ ನಂತರ ವಿಜಯನಗರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಕಡೆ ಚುನಾವಣಾ ನೀತಿ ಸಂಹಿತೆ ನಿಯಮ ಸಡಿಲಗೊಳಿಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬ ಅವರು ಮಾತನಾಡಿ, 5-6 ಚೆಕ್ ಪೋಸ್ಟ್ಗಳನ್ನು ಸ್ಥಾಪನೆ ಮಾಡಲಾಗುತ್ತದೆ ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚು ಚೆಕ್ ಪೋಸ್ಟ್ ಸ್ಥಾಪನೆ ಮಾಡಲು ಕೈಗೊಳ್ಳಲಾಗುತ್ತದೆ. ಚುನಾವಣೆಯನ್ನು ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.