ಲೋಕದರ್ಶನ ವರದಿ
ಬಳ್ಳಾರಿ 15: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ಕೆ.ನಿತೀಶ್ ಹಾಗೂ ಎಸ್ಪಿ ಸಿ.ಕೆ.ಬಾಬಾ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ಗಾದಿಗನೂರಿನ ಮತಗಟ್ಟೆಗಳಿಗೆ, ನಂತರ ಕಮಲಾಪುರದ ಮತಗಟ್ಟೆಗಳಿಗೆ ಹಾಗೂ ತುಂಗಾಭದ್ರಾ ಡ್ಯಾಂ ಬಳಿಯ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗ ನಿಗದಿಪಡಿಸಿದ ವಿವಿಧ ಸೌಕರ್ಯಗಳಿವೆಯೇ ಎಂಬುದನ್ನು ಜಿಲ್ಲಾ ಚುನಾವಣಾಧಿಕಾರಿಗಳು ಪರಿಶೀಲಿಸಿದರು. ಯಾರ್ಂಪ್ ವ್ಯವಸ್ಥೆ, ವ್ಹೀಲ್ ಚೇರ್, ಫ್ಯಾನ್, ವಿದ್ಯುತ್ ಸಂಪರ್ಕ, ಶೌಚಾಲಯ ವ್ಯವಸ್ಥೆಗಳನ್ನು ಪರಿಶೀಲಿಸಿದರು ಮತ್ತು ಅಗತ್ಯ ಸಲಹೆ-ಸೂಚನೆಗಳನ್ನು ಅವರು ಈ ಸಂದರ್ಭದಲ್ಲಿ ನೀಡಿದರು.
ಇದಕ್ಕೂ ಮುಂಚೆ ಅವರು ಚೆಕ್ ಪೋಸ್ಟ್ ಗಳಿಗೂ ಭೇಟಿ ಮಾಡಿ ಪರಿಶೀಲಿಸಿದರು ಮತ್ತು ನಿಯೋಜಿತರಾದ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಎಎಸ್ಪಿ ಮರಿಯಂ ಜಾರ್ಜ, ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಕಾಂಡೂ, ಡಿವೈಎಸ್ಪಿ ರಘುಕುಮಾರ್,ತಹಸೀಲ್ದಾರ್ ಸಿ.ಜಿ.ಹೆಗಡೆ ಸೇರಿದಂತೆ ಚುನಾವಣಾ ಸಿಬ್ಬಂದಿ ಮತ್ತಿತರರು ಇದ್ದರು.