ಬಳ್ಳಾರಿ 21: ಜಿಲ್ಲಾದ್ಯಂತ ಶುಕ್ರವಾರ ತಡರಾತ್ರಿ ವರುಣ ಅಬ್ಬರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ಮನೆ ಕುಸಿದರೆ, ಹಲವೆಡೆ ಗದ್ದೆ, ಹೊಲಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ರಾತ್ರಿ 12ಗಂಟೆಗೆ ಆರಂಭವಾದ ಮಳೆ ಸತತ 3-4 ಗಂಟೆ ಸುರಿಯಿತು. ಗುಡುಗು ಸಹಿತ ಮಳೆಗೆ ಕೊಪ್ಪಳ ತಾಲೂಕಿನ ಶಹಾಪುರ, ಸಿಂದೋಗಿ ಸೇರಿ ಇತರ ಗ್ರಾಮಗಳಲ್ಲಿ ಮನೆ ಕುಸಿದಿದ್ದು, ಕೆಲ ಮನೆಗಳ ಛಾವಣಿ ಕಿತ್ತು ಹೋಗಿವೆ. ಕೊಪ್ಪಳ ನಗರದ ಬೆಂಕಿನಗರ, ಹಮಾಲರ ಏರಿಯಾದಲ್ಲಿ ಚರಂಡಿ ತುಂಬಿ ರಸ್ತೆಗೆ ನೀರು ಹರಿದಿದ್ದಲ್ಲದೇ ತಗ್ಗು ಪ್ರದೇಶದ ಕೆಲ ಮನೆಗಳು ನುಗ್ಗಿ ಅವಾಂತರ ಸೃಷ್ಟಿಸಿದೆ. ಹಿಟ್ನಾಳ, ಬೇವಿನಹಳ್ಳಿ, ಲಿಂಗದಹಳ್ಳಿ ಮತ್ತು ಶಹಪುರದಲ್ಲಿ ಮನೆಗಳು ಕುಸಿದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಗದ್ದೆಗೆ ನೀರು ನುಗ್ಗಿ ಬೆಲೆ ನೆಲಕಚ್ಚಿದೆ. ಶಹಪುರದ ಗಂಗಮ್ಮ ಜೋಗಿ, ತಿಪ್ಪಣ್ಣ ಕಟ್ಟಿ, ಗಂಗಮ್ಮ ಸುಣಗಾರ, ಅಂಬಮ್ಮ ಸೇರಿ ಇತರರ ಸುಮಾರು 10-12 ಮನೆಗಳಿಗೆ ಹಾನಿಯಾಗಿವೆ.
ಕೆಲವೆಡೆ ವಿದ್ಯುತ್ ತಂತಿಗಳು ತುಂಡಾಗಿದ್ದು, ಶನಿವಾರ ಮಧ್ಯಾಹ್ನದವರೆಗೂ ವಿದ್ಯುತ್ ವ್ಯತಯ ಕಂಡುಬಂತು.
ಹಿರೇಹಳ್ಳ ಸೇರಿ ಬಹುಪಾಲು ಹಳ್ಳಗಳು ತುಂಬಿದ್ದು, ಕಿನ್ನಾಳ ಬಳಿಯ ಹಿರೇಹಳ್ಳ ಜಲಾಶಯ ಭತರ್ಿಯಾಗಿ ಹೆಚ್ಚುವರಿ ನೀರನ್ನ ಎರಡು ಗೇಟ್ಗಳ ಮೂಲಕ ಹಳ್ಳಕ್ಕೆ ಬಿಡಲಾಗಿದೆ. ಈ ಭಾಗದ ರೈತರು ಹಾಗೂ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಸಜ್ಜೆ, ಮೆಕ್ಕೆಜೋಳ ಸೇರಿ ಇತರ ಬೆಳೆಗಳು ಹಾನಿಯಾಗಿದ್ದು, ಹೊಲಗಳಲ್ಲಿ ಒಂದು ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಕೋಳೂರು ಬಳಿಯ ಬ್ರಿಡ್ಜ್ ಮುಂಭಾಗದ ತಡೆಗೋಡೆ ನೀರಿನ ರಭಸಕ್ಕೆ ಬಿರುಕುಬಿಟ್ಟಿದ್ದು, ನೀರು ಪೋಲಾಗುತ್ತಿದೆ.