ದಿವಾಳಿ ಮತ್ತು ದಿವಾಳಿತನ ಸಂಹಿತೆ(ತಿದ್ದುಪಡಿ) ವಿಧೇಯಕ ೨೦೨೦ಕ್ಕೆ ರಾಜ್ಯಸಭೆ ಅಂಗೀಕಾರ ನವದೆಹಲಿ

ದಿವಾಳಿ ಮತ್ತು ದಿವಾಳಿತನ  ಸಂಹಿತೆ(ತಿದ್ದುಪಡಿ) ವಿಧೇಯಕ ೨೦೨೦ಕ್ಕೆ ರಾಜ್ಯಸಭೆ  ಅಂಗೀಕಾರ  ನವದೆಹಲಿ, ಮಾ ೧೨ (ಯುಎನ್ಐ) ದಿವಾಳಿ ಮತ್ತು  ದಿವಾಳಿತನ  ಸಂಹಿತೆ(ಐಬಿಸಿ) ( ತಿದ್ದುಪಡಿ) ವಿಧೇಯಕ ೨೦೨೦ ಅನ್ನು  ರಾಜ್ಯಸಭೆ  ಗುರುವಾರ   ಧ್ವನಿಮತದಿಂದ ಅಂಗೀಕರಿಸಿತು.  ದಿವಾಳಿಹೊಂದಿದ ಕಂಪನಿಗಳ  ಯಶಸ್ವಿ  ಬಿಡ್ ದಾರರನ್ನು   ಹಿಂದಿನ ಆಡಳಿತ/ ಪ್ರವರ್ತಕರು ಎಸಗಿದ ಅಪರಾಧಗಳ  ಸಂಬಂಧ ಕ್ರಿಮಿನಲ್ ಮೊಕದ್ದಮೆಗಳಿಂದ   ರಕ್ಷಣೆ   ಕಲ್ಪಿಸಲು     ಈ  ವಿಧೇಯಕ ಅವಕಾಶ ಕಲ್ಪಿಸಲಿದೆ.   ವೀಧೇಯಕ  ಅಂಗೀಕರಿಸಲು   ಸದಸ್ಯರು  ಸಹಕರಿಸಬೇಕೆಂದು  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಕೋರಿದರು.  ಸಭಾಪತಿಯ ಪೀಠದಲ್ಲಿದ್ದ   ತಿರುಚ್ಚಿಶಿವ,  ವಿಧೇಯಕ ಅಂಗೀಕಾರಗೊಂಡಿದೆ ಎಂದು ಘೋಷಿಸಿದರು.  ೨೦೧೬ರಲ್ಲಿ  ಜಾರಿಗೆ ಬಂದಿರುವ ದಿವಾಳಿ ಮತ್ತು ದಿವಾಳಿತನ ಸಂಹಿತೆ, ಈ ಹಿಂದೆ ಮೂರು ಬಾರಿ ತಿದ್ದುಪಡಿ ಕಂಡಿದೆ, ಮೂರೂ  ತಿದ್ದುಪಡಿಗಳಿಗೆ  ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.  ವಿಧೇಯಕ ಕುರಿತು  ಮಾತನಾಡಿದ  ಸಚಿವೆ ಸೀತಾರಾಮನ್,   ತಿದ್ದುಪಡಿ ವಿಧೇಯಕದ ಹಿಂದೆ ಯಾವುದೇ  ಅನ್ಯ ಉದ್ದೇಶಗಳು ಇಲ್ಲ, ತಿದ್ದುಪಡಿಗಳು ನಿಯಮಿತ  ಬದಲಾವಣೆಗಳಿಗೆ  ಹಾಗೂ  ಸಮಯದ  ಅಗತ್ಯಗಳಿಗೆ ಹೊಂದಿಕೆಯಾಗುವಂತೆ   ರೂಪಿಸಲಾಗಿದ್ದು,  ಸುಪ್ರೀಂ ಕೋರ್ಟ್ನ ತೀರ್ಪ ಅನ್ನು ಯಥಾವತ್ತಾಗಿ ಜಾರಿಗೊಳಿಲಾಗಿದೆ  ಎಂದರು.    ಕಂಪನಿ ವಿವಾದಗಳಿಗೆ   ಸಂಬಂಧಿಸಿದ  ಪ್ರಕರಣಗಳ ವಿಲೇವಾರಿಯಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ (ಎನ್ಸಿಎಲ್ಎಟಿ) ಯ ಸಾಧನೆಯನ್ನು  ಶ್ಲಾಘಿಸಿದ  ಸಚಿವೆ  ಸೀತಾರಾಮನ್,  ಎನ್ ಸಿ ಎಲ್ ಎ ಟಿ ೨೦೨೦ ರ ಜನವರಿ ೩೧ ರವರೆಗೆ ಒಟ್ಟು ೬೪,೫೨೩ ಪ್ರಕರಣಗಳನ್ನು ವಿಲೇವಾರಿ ಮಾಡಿದೆ, ಈ ಪೈಕಿ  ೪೩,೧೦೨ ಪ್ರಕರಣಗಳು  ದಿವಾಳಿ ಮತ್ತು ದಿವಾಳಿತನ ಸಂಹಿತೆಗೆ ಸಂಬಂಧಪಟ್ಟವಾಗಿವೆ ಎಂದರು.    ಗೃಹ ಖರೀದಿದಾರರ ಹಿತಾಸಕ್ತಿಗಳನ್ನು  ರಕ್ಷಿಸಲು  ಸರ್ಕಾರ ಸಾಕಷ್ಟು  ಕ್ರಮ ಕೈಗೊಂಡಿದೆ. ಕಳೆದ ವರ್ಷದ  ಜುಲೈನಲ್ಲಿ ಮಂಡಿಸಿದ ಬಜೆಟ್ ನಲ್ಲಿ   ಹಾಗೂ  ಈ ವರ್ಷದ ಬಜೆಟ್ ನಲ್ಲಿ ಮನೆ ಖರೀದಿದಾರರ ಹಿತಾಸಕ್ತಿ  ರಕ್ಷಣೆಗೆ  ಅದ್ಯತೆ ನೀಡಿದ್ದು  ಪೂರ್ಣ ಮತ್ತು ಅಪೂರ್ಣಗೊಂಡಿರುವ    ಹಾಗೂ ಸ್ಥಗಿತಗೊಂಡಿರುವ  ವಸತಿ ಯೋಜನೆಗಳನ್ನು ಹೇಗೆ ಪುನಶ್ಚೇತನ ಗೊಳಿಸಬಹುದು   ಎಂಬುದರ ಕುರಿತು ಹಲವಾರು ಸುತ್ತಿನ ಚರ್ಚೆಗಳು ನಡೆದಿವೆ ಎಂದು ವಿವರಿಸಿದರು.ಸೂಕ್ಷ್ಮ, ಸಣ್ಣ ಹಾಗೂ ಮದ್ಯಮ  ಕೈಗಾರಿಕೆಗಳು ಹಣಕಾಸಿನ  ಬಿಕ್ಕಟ್ಟು  ಎದುರಿಸದಂತೆ  ಅವುಗಳಿಗೆ  ಸರ್ಕಾರ ನೀಡಬೇಕಿರುವ ಬಾಕಿ ಹಣ  ಬಿಡುಗಡೆಗೆ   ಅಧಿಕಾರಿಗಳಿಗೆ  ಸೂಚನೆ   ನೀಡಲಾಗಿದೆ ಎಂದು ಸೀತಾರಾಮನ್  ತಿಳಿಸಿದರು.  ಎಂಎಸ್ಎಂಇಗಳ ಸುಮಾರು  ಶೇ  ೮೦ ರಷ್ಟು   ಬಾಕಿ  ಹಣ  ಮಂಜೂರು ಮಾಡಲಾಗಿದೆ ಎಂದು ಸಚಿವರು ಹೇಳಿದರು.