ಯುಗಾದಿಯ ಪ್ರತಿ ಹೊಸ ವರ್ಷಕ್ಕೆ ನಮಿಸಲು ಬರುವ ಸೂರ್ಯದೇವ.. ಅಮೃತೇಶ್ವರ ದೇವಸ್ಥಾನ
Suryadev, who comes to worship every new year of Ugadi, Amruteshwara Temple
ಲೋಕದರ್ಶನ ವರದಿ
ರನ್ನಬೆಳಗಲಿ : ಕಲೆ, ಕಲಾವಿದರ ತವರೂರು ಎನಿಸಿಕೊಂಡ ರನ್ನನ ತವರೂರು ಬೆಳಗಲಿ, ಇಲ್ಲಿನ ಅಮೃತೇಶ್ವರ ದೇವಾಲಯವು ಮುಧೋಳ ತಾಲೂಕಿನಲ್ಲಿ ಎಲ್ಲಿಯೂ ಇರಲಾರದಂತಹ ವಿಶೇಷ ದೇವಾಲಯವಾಗಿದೆ. ಅತ್ಯಂತ ಪ್ರಾಚೀನ ದೇವಾಲಯ ಇದಾಗಿದೆ. ಅತಿ ಸುಂದರವಾದ ಕಲಾತ್ಮಕವಾಗಿ ಶಿಲ್ಪಗಳನ್ನು ಕೆತ್ತಲಾಗಿದ್ದು, ಚೌಕಾಕಾರ ಹಾಗೂ ನಕ್ಷತ್ರ ಆಕಾರದ ಜಗಲಿ ಮೇಲೆ ನಿರ್ಮಾಣವಾಗಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯಕ್ಕೆ ಮೂರು ಪ್ರವೇಶ ದ್ವಾರಗಳಿವೆ. ಪ್ರಮುಖ ದ್ವಾರ ಪೂರ್ವಕ್ಕೆ ಇದ್ದು, ದಕ್ಷಿಣಕ್ಕೆ ಒಂದು,ಉತ್ತರಕ್ಕೆ ಮತ್ತೊಂದು ದ್ವಾರಗಳಿವೆ. ಉತ್ತರ ದ್ವಾರಕ್ಕೆ ನೇರವಾಗಿ ಬೃಹದಾಕಾರದ ಗುಂಡನೆಯ ಏಕಶಿಲಾ ಕಲ್ಲಿನ ಕಟ್ಟೆಯನ್ನು ನೋಡಬಹುದು, ಇದು ಜನಪದ ಕತೆಯಲ್ಲಿ ಬಹಳಷ್ಟು ಸ್ವಾರಸ್ಯಕರವಾದ ವಿಷಯವನ್ನು ನೀಡುತ್ತದೆ. ಅದೇನೆಂದರೆ ಮೊಸರಿನ ಗಡಿಗೆಯ ಮುಚ್ಚಳ ಇದಾಗಿತ್ತು, ಆ ಗಡಗಿಯನ್ನು ಓರ್ವ ಮಹಿಳೆ ಹೊತ್ತುಕೊಂಡು ಮೊಸರು ಮಾರುತ್ತಿದ್ದಳು ಎಂದು ಜನಪದ ಕಥೆ ತಿಳಿಸುತ್ತದೆ.
ದೇವಾಲಯದ ಪೂರ್ವ, ದಕ್ಷಿಣ ಮತ್ತು ಉತ್ತರ ದಿಕ್ಕುಗಳಿಗೆ ಆನೆ ಸುಂಡಿಯ ಶಿಲ್ಪಕಲಾ ಶೈಲಿಯ ಸುಂದರ ಮೆಟ್ಟಿಲುಗಳಿವೆ. ಈ ದೇವಾಲಯ ಪ್ರಮುಖ ಮೂರು ಆವರಣಗಳನ್ನು ಹೊಂದಿದೆ ನವರಂಗ, ನಂದಿ ಮಂಟಪ ಹಾಗೂ ಗರ್ಭಗುಡಿ. ನವರಂಗ ಮಂಟಪದ ಆವರಣವು ತುಂಬಾ ವಿಶಾಲವಾಗಿದೆ. ಬಂದ ಭಕ್ತಾದಿಗಳಿಗೆ ಕುಳಿತುಕೊಳ್ಳಲು ಸುತ್ತಲೂ ಕಲ್ಲಿನ ಆಸನಗಳನ್ನು ಹೋಲುವ ಸುತ್ತುವರೆದ ಕಟ್ಟೆಯು ವಿಶ್ರಾಂತಿ ತೆಗೆದುಕೊಳ್ಳಲು ಕೈಬೀಸಿ ಕರೆಯುತ್ತಿವೆ. ಈ ನವರಂಗ ಆವರಣದಲ್ಲಿ ಒಟ್ಟು 22 ಕಂಬಗಳಿದ್ದು. ಇವುಗಳಲ್ಲಿ 16 ಕಂಬಗಳು ಅತ್ಯಂತ ಸೂಕ್ಷ್ಮ ಕೆತ್ತನೆಯ ಗೆಜ್ಜೆಯ ಸಾಲು, ಆನೆಗಳ ಸಾಲು, ನಕ್ಷತ್ರ ಹೂವಿನ ಸಾಲು, ಅತ್ತಿ ನುಣುಪಾದ ಸರಳಗೈ ವಿಭಿನ್ನ ಚಿತ್ರಗಳಲ್ಲಿ ಕಂಗೊಳಿಸುವ ಈ 16 ಕಂಬಗಳು, ಗತ ವೈಭವದ ಇತಿಹಾಸವನ್ನು ತಿಳಿಸುತ್ತಿವೆ. ಜೀರ್ಣೋದ್ಧಾರ ಸಮಯದಲ್ಲಿ ಹೊಸದಾಗಿ 6 ಕಂಬಗಳನ್ನು ಜೋಡಿಸಲಾಗಿದೆ, ಹಳೆ ಕಂಬಗಳಿಗಿರುವ ವಿಶೇಷ ಶೃಂಗಾರದ ಶಿಲ್ಪಕಲೆ ಇವುಗಳಲ್ಲಿ ಮೂಡಿಬಂದಿಲ್ಲ.
ನಂದಿಮಂಟಪದ ಪ್ರವೇಶ ದ್ವಾರದ ಬಲಕ್ಕೆ, ಉತ್ತರಕ್ಕೆ ಮುಖ ಮಾಡಿರುವ ಕಾಳಭೈರವ ಲಿಂಗವು, ಪೂರ್ವಕ್ಕೆ ಮುಖ ಮಾಡಿರುವ ಐದು ಹೆಡೆಯ ನಾಗಶೇಷ ಮತ್ತು ವಿಷ್ಣುವಿನ ಪಾದಗಳ ಹತ್ತಿರ ಸುಂದರ ಈರ್ವ ಸ್ತ್ರೀ ದೇವತೆಗಳ ದೇವತೆಗಳು, ಶ್ರೀ ಕೃಷ್ಣನ ನೃತ್ಯ ಭಂಗಿ, ಮತ್ತು ಕೃಷ್ಣಗೆ ನಮಿಸುತ್ತಿರುವ ಗೋಪಿಕೆಯರು, ದಕ್ಷಿಣಕ್ಕೆ ಮುಖ ಮಾಡಿರುವ ಸಪ್ತ ಹೆಡೆಯ ಸುಂದರನಾಗ ದೇವರ ವಿಗ್ರಹವು, ಈ ನಾಲ್ಕು ಮಂಟಪಗಳು ಗೋಡೆಯ ಮಧ್ಯಭಾಗದಲ್ಲಿ ಸುಂದರ ಐದು ಅಂತಸ್ತುಗಳ ಗೋಪುರದಲ್ಲಿ ಕಂಗೊಳಿಸುತ್ತಿವೆ. ನಂದಿ ಮಂಟಪದ ಪ್ರವೇಶ ದ್ವಾರವು ನಕ್ಷತ್ರ ಆಕಾರದ ಹೂವುಗಳಲ್ಲಿ ಶಿಲೆಯಲ್ಲಿ ಅರಳಿದ ಬಾಗಿಲ ಚೌಕಟ್ಟು ನೋಡುಗರ ಕಣ್ಮನ ಸೆಳೆಯುತ್ತದೆ. ಈ ನವರಂಗ ಮಂಟಪದ ಮಧ್ಯ ಭಾಗದಲ್ಲಿ ಬೃಹತ್ ಏಕಶಿಲಾ ವೃತ್ತವಿದ್ದು, ಇದು ಸದಾಕಾಲವು ತಂಪಾಗಿರುವುದರಿಂದ ಈ ವೃತ್ತದ ಕಲ್ಲಿನ ಕೆಳಗೆ ಬಾವಿ ಇರಬಹುದು, ಅಮೃತೇಶ್ವರ ದೇವಸ್ಥಾನದಿಂದ ಪುರಾತನ ಕಾಲದ ರಾಮಲಿಂಗೇಶ್ವರ ದೇವಸ್ಥಾನದವರೆಗೆ ಸುರಂಗ ಮಾರ್ಗ ಇರಬಹುದು ಎಂಬ ಸ್ಥಳೀಯರ ಅನಿಸಿಕೆಗಳಾಗಿವೆ.
ರಾಜ ಮಹಾರಾಜರ ಕಾಲದಲ್ಲಿ ಈ ಒಂದು ಸ್ಥಳದಲ್ಲಿ ನೃತ್ಯಗಳನ್ನು ಮಾಡಿಸುತ್ತಿದ್ದರು. ನೃತ್ಯಗಾರ್ತಿಗೆ ನೃತ್ಯ ಮಾಡಲು ನಿಗದಿಸಿದ ಸ್ಥಳವೇ ಈ ಶೀಲಾ ವೃತ್ತವಾಗಿದೆ. ಈ ಸ್ಥಳದ ಮೇಲ್ಭಾಗದಲ್ಲಿ ಬೃಹದಾಕಾರದ ಕಮಲಗಳು ಅರಳಿದ ಶಿಲಾ ಶಿಲ್ಪವು ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ನಂದಿ ಮಂಟಪಕ್ಕೆ ಹೊಂದಿಕೊಂಡಿರುವ ಒಳ ಗೋಡೆಯ ನಾಲ್ಕು ಕಂಬಗಳ ಶಿಲ್ಪ ಕಲೆಯಿಂದ ಸುಂದರವಾದ ರೂಪಗಳಲ್ಲಿ ಕಂಗೊಳಿಸುತ್ತಿವೆ. ಈ ಸ್ಥಳದ ಮಧ್ಯದಲ್ಲಿರುವ ನಂದಿ ವಿಗ್ರಹವೂ, ತನ್ನ ಕತ್ತನ್ನು ಬಲಕ್ಕೆ ಹೊರಳಿಸಿ ಬೃಹದಾಕಾರದ ಅಮೃತೇಶ್ವರ ಲಿಂಗವನ್ನು ನೋಡುವಂತಿದೆ. ಈ ನಂದಿ ವಿಗ್ರಹದ ಮಧ್ಯದ ಮೇಲ್ಭಾಗದಲ್ಲಿ ಶ್ರೀ ಚಕ್ರದ ಮಧ್ಯೆ ಕಮಲದ ಮೊಗ್ಗಿನ ಶಿಲ್ಪಕಲಾ ಆಕಾರವು ಸುಂದರವಾಗಿ ಮೂಡಿಬಂದಿದೆ.
ಗರ್ಭಗುಡಿಯ ಪೂರ್ವಾಭಿಮುಖವಾಗಿರುವ ದ್ವಾರ ಬಾಗಿಲಿನ ಮೇಲೆ ರಾಷ್ಟ್ರಕೂಟರ ಶಿಲ್ಪಕಲಾ ಶೈಲಿಯ ಐದು ಚಿಕ್ಕ ಗೋಪುರಗಳನ್ನು ಹೊಂದಿರುವ ಶಿಲಾ ದ್ವಾರಬಾಗಿಲು ಶಿಲ್ಪ ಕಲೆಗೆ ಶಿಖರವನ್ನು ಇಟ್ಟಂತಾಗಿದೆ. ಗರ್ಭಗುಡಿಯ ಮಧ್ಯ ಭಾಗದಲ್ಲಿ ನಮ್ಮ ರಾಜ್ಯದ ಎರಡನೆಯ ಅತಿ ದೊಡ್ಡ ಲಿಂಗ ಎಂಬ ಹೆಗ್ಗಳಿಕೆಗೆ ಪಾತ್ರವಾದ, ವಿಶೇಷ ಚಿಹ್ನೆ ಹೊಂದಿರುವ ಅಮೃತೇಶ್ವರ ಲಿಂಗವು ಶಾಂತ ಸ್ವರೂಪದಲ್ಲಿ ಎಲ್ಲಾ ಭಕ್ತರಿಗೆ ಅನಂತ ವರಗಳನ್ನು ಕೊಡುವ ಕಲಿಯುಗದ ದೈವ ವಾಗಿದ್ದಾನೆ. ಈ ಲಿಂಗದ ಮಧ್ಯದ ಮೇಲ್ಭಾಗದಲ್ಲಿ ಶ್ರೀ ಚಕ್ರದಲ್ಲಿ ಅರಳಿದ ಕಮಲದ ಮೊಗ್ಗಿನ ಮಧ್ಯದಲ್ಲಿನ ರಂಧ್ರಕ್ಕೆ ಪಂಚಲೋಹದ ಸರಪಳಿ ಕಟ್ಟಿ ಪಂಚಲೋಹದ ಬಿಂದಿಗೆಯನ್ನು ತೂಗೆ ಬಿಟ್ಟಿದ್ದು ವಿಶೇಷ ಸಂದರ್ಭದಲ್ಲಿ ಜಲಾಭಿಷೇಕಕ್ಕೆ ಬಳಸುವ ವಾಡಿಕೆ ಇದೆ. ಈ ದೇವಸ್ಥಾನವು ಸಂಪೂರ್ಣವಾಗಿ ಬೃಹತ ಕಲ್ಲುಗಳಿಂದ ನಿರ್ಮಾಣವಾಗಿದೆ. ದೇವಾಲಯವನ್ನು ಹೊರಗಿನಿಂದ ನೋಡಿದರೆ ಕಲಾತ್ಮಕತೆಯು ಗೋಚರಿಸುವುದಿಲ್ಲ. ದೇವಾಲಯದ ಒಳಹೊಕ್ಕು ನೋಡಿದರೆ ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ವೈಭವವನ್ನು ಕಾಣಬಹುದಾಗಿದೆ. ಇಡೀ ಅವಳಿ ಜಿಲ್ಲೆಗಳಲ್ಲಿ ಇಂತಹ ವೈಭವದ ವಾಸ್ತುಶಿಲ್ಪ ಕಲೆಯನ್ನು ಹೊಂದಿದ ಕಲ್ಯಾಣ ಚಾಲುಕ್ಯರ ದೇವಾಲಯ ಇನ್ನೊಂದಿಲ್ಲ.
ಈ ಅಮೃತೇಶ್ವರ ದೇವಾಲಯದಲ್ಲಿ ಪ್ರತಿ ಚಂದ್ರಮಾನ ಯುಗಾದಿ ಪಾಡ್ಯ ದಿನದಂದು ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳು ಲಿಂಗದ ಮೇಲೆ ಬೀಳುವುದು ಇಲ್ಲಿನ ವಿಶೇಷ. ಮಹಾಕವಿ ರನ್ನನನ್ನು ತನ್ನ ಮಡಿಲಿಟ್ಟು, ಆ ಕವಿಯ ಹೆಸರಿನಿಂದಲೇ ಈ ಪಟ್ಟಣವು ಸೇರಿಕೊಂಡು ರನ್ನ ಬೆಳಗಲಿಯಾಗಿ ರೂಪಗೊಂಡಿರುವ ಈ ಪಟ್ಟಣದ ದೇವಸ್ಥಾನವು ಯುಗಾದಿ ಹಬ್ಬದಂದು ಗೋಚರಿಸುವ ವಿಸ್ಮಯ ಮತ್ತು ಭಕ್ತಿಯ ಸುಧೆಯನ್ನ ನೋಡಲು ಎಲ್ಲಾ ಭಕ್ತಾದಿಗಳನ್ನು ಇತಿಹಾಸಕಾರರನ್ನು ಕೈಬೀಸಿ ಕರೆಯುತ್ತಿದೆ. ಆ ದಿನ ಬೆಳಿಗ್ಗೆ ಅಮೃತೇಶ್ವರ ದೇವಾಲಯ ಪ್ರವೇಶಿಸುವ ಸೂರ್ಯನ ಕಿರಣಗಳು ಅಂದಾಜು ಹತ್ತರಿಂದ ಹದಿನೈದು ನಿಮಿಷಗಳವರೆಗೆ ಲಿಂಗದ ಸುತ್ತಲೂ ಹಾಯ್ದು ಲಿಂಗದ ಮೇಲೆ ಕಾಣಿಸಿಕೊಳ್ಳುತ್ತದೆ.
ನಂತರ ಕೆಲವೇ ನಿಮಿಷಗಳಲ್ಲಿ ಸೂರ್ಯದೇವನಿಂದ ಲಿಂಗದ ಪಾದಪೂಜೆ ನೆರವೇರುತ್ತೆ. ಈ ಒಂದು ಭಕ್ತಿಯ ಕ್ಷಣದ ದೃಶ್ಯವನ್ನು ಪ್ರತಿವರ್ಷ ಸಮಸ್ತ ಸ್ಥಳೀಯರು ನೆರೆಹೊರೆಯ ಪಟ್ಟಣ, ಗ್ರಾಮಗಳಿಂದ ಬಂದ ಜನಸಮುಹ ವೀಕ್ಷಿಸಿ ಪುನೀತರಾಗುತ್ತಾರೆ. ಸುಮಾರು 38 ವರ್ಷಗಳಿಂದ ಈ ದೇವಸ್ಥಾನದಲ್ಲಿ ಪ್ರತಿ ಶ್ರಾವಣ ಪೂರ್ಣ ಒಂದು ಮಾಸದಲ್ಲಿ ಭಜನೆ ಕೀರ್ತನೆ ಮತ್ತು ಪ್ರವಚನಗಳು ನಡೆಯುತ್ತಿವೆ. ಅಲ್ಲದೆ ಪ್ರತಿ ಪೂರ್ಣಮೆ ಎಂದು ಶಿವ ಭಜನೆ ಸಾಂಗವಾಗಿ ನಡೆಯುತ್ತಾ ಬಂದಿದೆ, ಶ್ರಾವಣದ ಅಮಾವಾಸ್ಯೆ ಎಂದು ಅಮೃತೇಶ್ವರ ದೇವಸ್ಥಾನದ ಜಾತ್ರೆ ವಿಜೃಂಭಣೆಯಿಂದ ಜರುಗುತ್ತದೆ. ಸರಕಾರ ಹಾಗೂ ಸ್ಥಳೀಯರಿಂದ ಈ ದೇವಸ್ಥಾನ ಅಭಿವೃದ್ಧಿಯತ್ತಸಾಗಿದೆ. ಇಂದು ಹಸಿರು ಸಿರಿಯಲ್ಲಿ ಅಮೃತೇಶ್ವರ ದೇವಸ್ಥಾನವು ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 