ಕೊರೋನಾ ಸೋಂಕಿತರಲ್ಲದ ರೋಗಿಗಳಿಗೆ ಆಯುಷ್ಮಾನ್ ಭಾರತ ಯೋಜನೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ; ಸುರೇಶ್ ಕುಮಾರ್

ಬೆಂಗಳೂರು, ಏ 22, ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳು ಎಂದು ಗುರುತಿಸಿರುವುದರಿಂದ ಸೋಂಕಿತರಲ್ಲದ ಇತರ ರೋಗಿಗಳ ಚಿಕಿತ್ಸೆಗೆ ಅಡೆಚಣೆ ತಪ್ಪಿಸಲು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದಡಿ ಬರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.ಕೋವಿಡ್ -19 ಕುರಿತ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೋಂಕುರಹಿತ ಇತರ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಸಂಬಂಧ ಸುತ್ತೋಲೆ ಹೊರಡಿಸಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಇಂದು 22 ಸ್ಥಳಗಳನ್ನು ಹೊಸದಾಗಿ ಕೋವಿಡ್ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದೆ. ಇದರಿಂದ ದೇಶದಲ್ಲಿ ಜಿಲ್ಲಾಧಿಕಾರಿಗಳು ಗುರುತಿಸಿದಂತೆ ಒಟ್ಟು 359 ಸೂಕ್ಷ್ಮ (ಕಂಟೈನ್ ಮೆಂಟ್ ) ಪ್ರದೇಶಗಳಿವೆ ಎಂದು ವಿವರ ನೀಡಿದರು. ಇತ್ತೀಚೆಗೆ ಗಲಭೆ ನಡೆದ ಬಿಬಿಎಂಪಿ ವ್ಯಾಪ್ತಿಯ ಪಾದರಾಯನಪುರದಲ್ಲಿ 135 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದರು. ಸರ್ಕಾರದ ಅನುಮತಿ ಮೇರೆಗೆ ಬೆಂಗಳೂರಿನಲ್ಲಿಮೆಟ್ರೋ ರೈಲು ಕಾಮಗಾರಿ, ಬಿಬಿಎಂಪಿ ಹೊರಭಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ, ಕೈಗಾರಿಕಾ ಪ್ರದೇಶದಲ್ಲಿ ಕಟ್ಟಡ ಕಾಮಗಾರಿ, ಸಿಮೆಂಟ್ ಸ್ಟೀಲ್, ಇಟ್ಟಿಗೆ ಸಾಗಾಣಿಕೆಗೆ ಅನುಮತಿ ನೀಡಲಾಗುವುದು. ಕಟ್ಟಡ ಮಾಲೀಕರು, ಅಲ್ಲಿಯೇ ಇರುವ ಕಾರ್ಮಿಕರನ್ನು ಬಳಸುವಂತೆ ಕಟ್ಟಡ ಕಾಮಗಾರಿಗಳನ್ನು ನಡೆಸಬಹುದು ಎಂದು ವಿವರಿಸಿದರು.