ಲೋಕದರ್ಶನ ವರದಿ
ಅಥಣಿ 20: ಇಲೇಕ್ಟ್ರಿಕ್ ವಾಹನಗಳ ಖರೀದಿ ಸಂಭಂಧದಲ್ಲಿ ವಿದೇಶಿ ಕಂಪನಿಯೊಂದರ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆದಿದ್ದು, ಈ ಸಂಬಂಧದಲ್ಲಿ ಇಷ್ಟರಲ್ಲಿಯೇ ವಿದೇಶಕ್ಕೆ ತೆರಳಿ ಮುಖ್ಯಮಂತ್ರಿಗಳಿಗೆ ವರದಿ ಒಪ್ಪಿಸುವುದಾಗಿ ಡಿಸಿಎಮ್ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಅವರು ಬಸ್ ನಿಲ್ದಾಣದ ನೂತನ ಕಟ್ಟಡ ಉದ್ಘಾಟಿಸಿ ಮತ್ತು ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡುತ್ತಿದ್ದರು.
ವಿದೇಶಿ ಕಂಪನಿಯೊಂದು ಸಾರಿಗೆ ಇಲಾಖೆಗೆ 10 ರಿಂದ 30 ಸಾವಿರದವರೆಗೆ ಇಲೆಕ್ಟ್ರಿಕ್ ವಾಹನಗಳನ್ನು ಯಾವುದೇ ಹಣ ಪಡೆಯದೇ ನೀಡುತ್ತದೆ ಜೊತೆಗೆ ಈ ಎಲ್ಲ ವಾಹನಗಳ ನಿರ್ವಹಣೆ ಮತ್ತು ಸದ್ಯ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಚಾಲಕ ಮತ್ತು ನಿರ್ವಾಹಕರ ಮತ್ತು ಸಿಬ್ಬಂದಿಗಳ ಸಂಬಳದ ವೆಚ್ಚವನ್ನೂ ಕೂಡ ವಿದೇಶಿ ಕಂಪನಿಯೇನ ನಿಭಾಯಿಸುತ್ತದೆ ಅಲ್ಲದೆ ಲಾಭದಲ್ಲಿ ಶೇ.60 ರಷ್ಟು ಪಾಲನ್ನು ಕೂಡ ಸಾರಿಗೆ ಇಲಾಖೆಗೆ ನೀಡುತ್ತದೆ ಎಂದ ಅವರು ಈ ಸಂಬಂಧದಲ್ಲಿ ಇಷ್ಟರಲ್ಲಿಯೇ ನಿರ್ಧರಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 130000 ಸಾವಿರ ಸಾರಿಗೆ ನೌಕರರು ಹಗಲು ರಾತ್ರಿ ದುಡಿಯುತ್ತಾರೆ ಆದರೆ ನಿಗಮದಿಂದ ಸಂಬಳ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಅಲ್ಲದೆ ತಮಗೆ ಸಿಗಬೇಕಾದ ಸೌಲತ್ತುಗಳು ಕೂಡ ಸಿಗುತ್ತಿಲ್ಲ ಹೀಗಾಗಿ ನಮ್ಮನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಅನೇಕ ವರ್ಷಗಳಿಂದ ರಾಜ್ಯ ಸರಕಾದ ಮುಂದೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ ಆದರೆ ಇಲ್ಲಿಯವರೆಗೂ ಸಾರಿಗೆ ನೌಕರರ ಬೇಡಿಕೆ ಮಾತ್ರ ಈಡೇರಿಲ್ಲ. ಈ ವಿಷಯವನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಿ ಸಾರಿಗೆ ಇಲಾಖೆ ನೌಕರರನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣಿಸುವ ಸಂಬಂಧದಲ್ಲಿ ಸಿಎಮ್ ಯಡಿಯುರಪ್ಪನವರ ಗಮನಕ್ಕೆ ತಂದಾಗ ತಕ್ಷಣ ಸ್ಪಂದಿಸಿದ ಅವರು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದಾರೆ ಈ ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದರು.
ಸಾರಿಗೆ ಇಲಾಖೆಯ ಬಸ್ಗಳು ಸಾಕಷ್ಟು ಹಳೆಯದಾಗಿವೆ ಹೀಗಾಗಿ ಅನವಶ್ಯಕವಾಗಿ ಇಲಾಖೆಗೆ ವೆಚ್ಚ ಹೆಚ್ಚಾಗುತ್ತಿದೆ ಈ ಸಂಬಂಧದಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿಯೇ 3000 ಬಸ್ಗಳ ಖರೀದಿಯ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ ಆದರೆ ಹಣಕಾಸಿನ ವ್ಯವಸ್ಥೆ ಆಗಲಿಲ್ಲ ಹೀಗಾಗಿ ಬಸ್ಗಳ ಖರೀದಿ ಸಾಧ್ಯವಾಗಲಿಲ್ಲ ಆದರೆ ಈಗ ಮತ್ತೆ ನಮ್ಮ ಸರಕಾರದ ಅವಧಿಯಲ್ಲಿ ಮತ್ತೆ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇಷ್ಟರಲ್ಲಿಯೇ ಹಣಕಾಸಿನ ವ್ಯವಸ್ಥೆ ಮಾಡಿಕೊಂಡು 3000 ಕ್ಕೂ ಹೆಚ್ಚು ಹೊಸ ಬಸ್ಗಳ ಖರೀದಿ ಮಾಡಲಾಗುವುದು ಎಂದ ಅವರು ಹಂತ ಹಂತವಾಗಿ ಸಾರಿಗೆ ಇಲಾಖೆಯಲ್ಲಿನ ಸೋರಿಕೆ ತಡೆದು ಲಾಭದತ್ತ ಕೊಂಡೋಯ್ಯುವ ಗುರಿ ತಮ್ಮದಾಗಿದೆ ಎಂದು ಹೇಳಿದರು.
ವಾಯವ್ಯ ಸಾರಿಗೆಯಲ್ಲಿ 20000 ಮತ್ತು ಈಶಾನ್ಯ ಸಾರಿಗೆ ಇಲಾಖೆಯಲ್ಲಿ 17000 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಕಾರ್ಯ ಈಗಾಗಲೇ ಪ್ರಾರಂಭಗೊಂಡಿದೆ. ಈ ನೇಮಕ ಪ್ರಕ್ರಿಯೆ ನಂತರ ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಸ್ವಲ್ಪ ಮಟ್ಟಿಗೆ ನೀಗಲಿದೆ ಎಂದರು. ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಉತ್ತರ ಕರ್ನಾಟಕದ ಸುಮಾರು 40 ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಆದರೆ ಈ ನೌಕರರು ನಮ್ಮನ್ನು ಉತ್ತರ ಕರ್ನಾಟಕಕ್ಕೆ ವರ್ಗ ಮಾಡಿ ಎಂದು ಸಾಕಷ್ಟು ವರ್ಷಗಳಿಂದ ಮನವಿ ಮಾಡಿಕೊಳ್ಳುತ್ತಿದ್ದರೂ ಸಾಧ್ಯವಾಗಿಲ್ಲ ಎಂದ ಅವರು ನೌಕರಿಗೆ ಅರ್ಜಿ ಸಲ್ಲಿಸುವಾಗಿ ಉತ್ತರ ಕರ್ನಾಟಕದವರು ಈ ಭಾಗದಲ್ಲಿಯೇ ಅರ್ಜಿಸಲ್ಲಿಸಿ ಇಲ್ಲವಾದಲ್ಲಿ ನೌಕರಿಯಲ್ಲಿ ಅಡತಡೆ ಉಂಟಾಗಬಹುದು ಈಗಲೇ ಎಚ್ಚರ ವಹಿಸಿ ಎಂದರು. ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ಸಿಎಮ್ ಯಡಿಯುರಪ್ಪನವರು ಕೃಷ್ಣಾ ನದಿಯಿಂದ ನೀರು ಬಿಡಲು ಯಾವುದೇ ಒಪ್ಪಂದ ಮಾಡಿಕೊಳ್ಳುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಆದರೆ ಬೇಸಿಗೆ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ 4 ಟಿಎಮ್ಸಿ ನೀರು ಬಿಡುವ ಮತ್ತು ಮಳೆಗಾಲದ ಸಂದರ್ಭದಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 4 ಟಿಎಮ್ಸಿ ನೀರು ಬಿಡುವ ಮಹಾರಾಷ್ಟ್ರದ ಪ್ರಸ್ತಾವನೆಗೆ ಪರಿಶೀಲಿಸುವದಾಗಿ ಹೇಳಿಕೆ ನೀಡಿದ್ದಾರೆ ಆದರೆ ಅವರ ಈ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ 5 ವರ್ಷ ಅಪಘಾತ ಮಾಡದೇ ಚಾಲನೆ ಮಾಡಿದ ಚಾಲಕ ಮತ್ತು ನಿರ್ವಾಹಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಿದರು. ಚಿಕ್ಕೋಡಿ ಸಂಸದ ಅಣ್ಣಸಾಹೇಬ ಜೊಲ್ಲೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಕುಡಚಿ ಶಾಸಕ ಪಿ.ರಾಜು, ವಾಯವ್ಯ ಕರ್ನಾಟಕ ಸಾರಿಗೆ ಅಧ್ಯಕ್ಷ ವ್ಹಿ.ಎಸ್.ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಜಿಲ್ಲಾ ಪಂಚಾಯತ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.