ಬೆಂಗಳೂರು, ಏ.23, ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರನ್ನು ಖಾಯಂಗೊಳಿಸಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗುತ್ತಿಗೆ ವೈದ್ಯಾಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ವೈದ್ಯರಾಗಿ 500ಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಸುಮಾರು 250ಕ್ಕೂ ಹೆಚ್ಚು ವೈದ್ಯರು ಮೂರರಿಂದ - 6 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಗುತ್ತಿಗೆ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೈದ್ಯರ ವೇತನ ಖಾಯಂ ವೈದ್ಯರ ವೇತನಕ್ಕಿಂತ ಅತಿ ಕಡಿಮೆ ಇದೆ. ಆದರೂ ಗುತ್ತಿಗೆ ವೈದ್ಯರು ಯಾವುದೇ ಲೋಪವಿಲ್ಲದೆ, ನಿಷ್ಠೆ, ಶ್ರದ್ಧೆ, ಸಹಾನುಭೂತಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಆರೋಗ್ಯ ಕಾರ್ಯಕ್ರಮಗಳಲ್ಲಿ ಹಾಗೂ ಆರೋಗ್ಯ ಇಲಾಖೆಯಲ್ಲಿ ಮುಂಚೂಣಿಯಲ್ಲಿರುವ ಗುತ್ತಿಗೆ ವೈದ್ಯರ ಪಾತ್ರ ಕೂಡ ಅತಿ ಮುಖ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರಪಂಚದಾದ್ಯಂತ ಕೋವಿಡ್ -19 ಕಾಯಿಲೆ ಹರಡುತ್ತಿದ್ದು, ಈ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳನ್ನು ಮುಚ್ಚಲಾಗಿದೆ. ಆದರೆ ಸರ್ಕಾರಿ ವೈದ್ಯರು ಹಿಂಜರಿಯದೆ ಕೋವಿಡ್ 19 ಕಾಯಿಲೆಯನ್ನು ಹಿಮ್ಮೆಟ್ಟಿಸಿ, ಕಾಯಿಲೆ ಉಲ್ಬಣಗೊಳ್ಳದಂತೆ ತಡೆಯಲು ತಮ್ಮ ತನು ಮನಗಳನ್ನು ಅರ್ಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಗುತ್ತಿಗೆ ವೈದ್ಯರ ಪಾತ್ರ ಕೂಡ ಮಹತ್ವರವಾದುದು. ಜನರಲ್ಲಿ ಮುಂಜಾಗೃತಿಯನ್ನುಂಟು ಮಾಡಿ ಕಾಯಿಲೆಯನ್ನು ತಡೆಗಟ್ಟಲು ಅತ್ಯಂತ ಶ್ರಮವಹಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
ನಮ್ಮ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ, ಮಡಿಕೇರಿ ಹಾಗೂ ಸಕಲೇಶಪುರದಲ್ಲಿ ಅತಿವೃಷ್ಟಿಯಾಗಿ, ಪ್ರವಾಹ ಸ್ಥಿತಿ ಒದಗಿ ಬಂದು ನಮ್ಮ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದಾಗ, ಗುತ್ತಿಗೆ ವೈದ್ಯರು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ, ಹಗಲು ರಾತ್ರಿಯೆನ್ನದೆ ಬಹಳ ಮುತುವರ್ಜಿಯಿಂದ ಜನರಿಗೆ ಯಾವುದೇ ರೀತಿಯ ಆರೋಗ್ಯದ ತೊಂದರೆಯಾಗದಂತೆ ಹಾಗೂ ಯಾವುದೇ ರೀತಿಯ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಕರ್ತವ್ಯ ನಿರ್ವಹಿಸಿದ್ದಾರೆ.ಹಾಸನದಲ್ಲಿ ನಡೆದ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದಲ್ಲಿ ಆರೋಗ್ಯ ಇಲಾಖೆಯ ಯಶಸ್ವಿಗೆ ಗುತ್ತಿಗೆ ವೈದ್ಯರ ಕೊಡುಗೆ ಸಹ ಅತಿ ಮುಖ್ಯವಾಗಿದೆ ಎಂದು ತಿಳಿಸಲಾಗಿದೆ.
ಆಸ್ಪತ್ರೆಯನ್ನು ಶುಚಿಯಾಗಿಡಲು ಹಾಗೂ ಆಸ್ಪತ್ರೆಗಳನ್ನು ಉನ್ನತ ಮಟ್ಟಕ್ಕೇರಿಸಲು ಕಾಯಕಲ್ಪದಡಿ ಗುತ್ತಿಗೆ ವೈದ್ಯರು ಕೂಡ ಬಹಳ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ವೈದ್ಯರು ಕಾರ್ಯನಿರ್ವಹಿಸುತ್ತಿರುವ ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶುಚಿತ್ವ ಹಾಗೂ ರೋಗಿಯ ಆರೋಗ್ಯ ಕಾಪಾಡಲು ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು, ಈ ವೈದ್ಯರಿಗೆ ಕಾಯಕಲ್ಪ ಪೀರ್ ಅಸೆಸ್ಮೆಂಟ್‌ನಲ್ಲಿ ಬಹುಮಾನಗಳು ಸಹ ದೊರೆತಿವೆ. ಈ ಮೊದಲು ಹಲವು ವರ್ಷಗಳಿಂದ ಮೂರು ವರ್ಷ ಸಂಪೂರ್ಣಗೊಳಿಸಿದ ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸುವುದು ರೂಢಿಯಲ್ಲಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸಿಲ್ಲ. ಆದ್ದರಿಂದ ನಮ್ಮ ಸೇವೆಯನ್ನು ಪರಿಗಣಿಸಿ ಮಾನವೀಯ ನೆಲೆಗಟ್ಟಿನಲ್ಲಿ ಸೂಕ್ತ ಕ್ರಮಕೈಗೊಂಡು ನಮ್ಮನ್ನು ಖಾಯಂಗೊಳಿಸಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ನಮ್ಮನ್ನು ಖಾಯಂಗೊಳಿಸಿದಲ್ಲಿ, ನಾವು ಉತ್ಸುಕವಾಗಿ ಬಹಳ ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ನಮ್ಮ ರಾಜ್ಯ ಆರೋಗ್ಯ ಇಲಾಖೆಯಲ್ಲಿ ಹಾಗೂ ರಾಜ್ಯದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರಲು ನಮ್ಮ ಸಾಮರ್ಥ್ಯಕ್ಕೂ ಮೀರಿ ಕೆಲಸ ನಿರ್ವಹಿಸುತ್ತೇವೆ. ನಿಮ್ಮಂತಹ ಜನಸ್ನೇಹಿ, ನುಡಿದಂತೆ ನಡೆಯುವ, ದಕ್ಷತೆಯಿಂದ ಕಾರ್ಯನಿರ್ವಹಿಸುವ ಮುಖ್ಯಮಂತ್ರಿಗಳನ್ನು ಪಡೆದ ನಾವು ನಿಮಗೆ ಚಿರಋಣಿಯಾಗಿದ್ದು, ಈ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.