ತುಮಕೂರಿನಲ್ಲಿ ಕೋವಿಡ್-19 ಸೋಂಕಿನ ಮತ್ತೊಂದು ಪ್ರಕರಣ ಧೃಡ: ಜಿಲ್ಲಾಧಿಕಾರಿ

ತುಮಕೂರು, ಏ.24, ತುಮಕೂರು ಜಿಲ್ಲೆಯಲ್ಲಿ ಗುಜರಾತ್ ಮೂಲದ ರೋಗಿ 447 ವ್ಯಕ್ತಿಯಲ್ಲಿ ಕೋವಿಡ್-19ರ ಪ್ರಕರಣ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ತಿಳಿಸಿದ್ದಾರೆ.ಸೋಂಕಿತ ವ್ಯಕ್ತಿಯು ಮಾರ್ಚ್ 12ರಂದು ತುಮಕೂರು ಜಿಲ್ಲೆಗೆ ಆಗಮಿಸಿದ್ದು, ದೇಶದಲ್ಲಿ  ಲಾಕ್‌ಡೌನ್ ಆಗಿರುವುದರಿಂದ ಇಲ್ಲೇ ಉಳಿದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್-19ರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊರ ರಾಜ್ಯದಿಂದ ಬಂದಿರುವ ವ್ಯಕ್ತಿಗಳನ್ನು ರ‍್ಯಾಂಡ್‌ಮ್ ಆಗಿ ತಪಾಸಣೆಗೊಳಪಡಿಸಲಾಗಿತ್ತು. ಇದರಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯು ಮಾರ್ಚ್ 12ರಿಂದ ನಗರದ ಪಿ.ಎಚ್ ಕಾಲೋನಿಯ ಮಸೀದಿಯಲ್ಲಿ ವಾಸವಿದ್ದರು. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಹೇಳಿದರು.  ಸದ್ಯದ ಪರಿಸ್ಥಿತಿಯಲ್ಲಿ ಪಿ.ಎಚ್ ಕಾಲೋನಿಯನ್ನು ಸಂಪೂರ್ಣವಾಗಿ “ಕಂಟೈನ್ಮೆಂಟ್ ವಲಯ” ವೆಂದು ಪರಿಗಣಿಸಿ ಸೀಲ್‌ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಮೆಡಿಕಲ್ ತುರ್ತು ಸೇವೆ ಹೊರತುಪಡಿಸಿ, ಅನಗತ್ಯವಾಗಿ ಓಡಾಡಲು ಅವಕಾಶವಿರುವುದಿಲ್ಲ. ಇಲ್ಲಿ ಹೊರಗೆ/ಒಳಗೆ ಹೋಗುವ ಪ್ರವೇಶ ಒಂದೇ ಕಡೆ ಮಾಡಲಾಗಿದ್ದು, ಇನ್ಸಿಡೆಂಟ್ ಕಮಾಂಡರನ್ನು ನೇಮಕ ಮಾಡಿದ್ದು, ಅವರು ಜನರ ಚಲನವಲನಗಳನ್ನು ವೀಕ್ಷಿಸುತ್ತಿರುತ್ತಾರೆ ಎಂದರು.

ಆರೋಗ್ಯ ಇಲಾಖಾ ಸಿಬ್ಬಂದಿಗಳ ತಂಡವು ಮನೆ-ಮನೆಗೆ ಭೇಟಿ ನೀಡಿ, ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ಮಾಡುತ್ತಾರೆ. ಇವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೆ ಅವರಿಗೆ ತುರ್ತು ಆಗಿ ಚಿಕಿತ್ಸೆಗೆ ಒಳಪಡಿಸಲಾಗುವುದು. ಈ ಪ್ರದೇಶದಲ್ಲಿರುವ ಜನರು ಭಯಪಡದೇ ಧೈರ್ಯವಾಗಿರಬೇಕು.  ನಿಮಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಮಹಾನಗರ ಪಾಲಿಕೆ ವತಿಯಿಂದ ಮನೆ-ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆರೋಗ್ಯ ಸಿಬ್ಬಂದಿ ಬಂದಾಗ ಅವರಿಗೆ ಸ್ಪಂದಿಸಿ ಸರಿಯಾದ ಮಾಹಿತಿಯನ್ನು ನೀಡಿ,  ತಪ್ಪು ಮಾಹಿತಿ ನೀಡಿದರೆ ಸೋಂಕನ್ನು ತಡೆಗಟ್ಟುವುದು ಕಷ್ಟವಾಗುತ್ತದೆ. ಈ ಸೋಂಕಿತ ವ್ಯಕ್ತಿಯ ಜೊತೆ ಯಾರಾದರೂ ಸಂಪರ್ಕದಲ್ಲಿ ಇದ್ದವರ ಕುರಿತು ಅಂತಹವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜನರಲ್ಲಿ ಮನವಿ ಮಾಡಿದರು.