ಸಾಹಿತ್ಯಕ್ಕೆ ಅಂಧರ ಕೊಡುಗೆ ಅಪಾರ: ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು
ವಿಜಯಪುರ 29: ಅಂಧತ್ವವನ್ನು ಮೆಟ್ಟಿನಿಂತು ಸಂಗೀತದ ಮೂಲಕ ಸಮಾಜಕ್ಕೆ ಬೆಳಕಾದವರು ಪಂಡಿತ್ ಪಂಚಾಕ್ಷರ ಗವಾಯಿಗಳು. ಅದನ್ನೇ ಧನಾತ್ಮಕವಾಗಿ ಸ್ವೀಕರಿಸಿ ಬದುಕಿನಲ್ಲಿ ಸಾಧಿಸಿದವರು ಬಹಳ ಜನರಿದ್ದಾರೆ. ಅಂಧರಿಗಾಗಿಯೇ ಲಿಪಿ ಸಿದ್ದಪಡಿಸಿದ ಲೂಯಿಸ್ ಬ್ರೆಲ ಅಂಧರಿಗೆ ಬೆಳಕಾದವರು.ಅಂಧರಿಗೆ ಅವಕಾಶ ಬೇಕಷ್ಟೇ, ಬೇಕಾದದ್ದನ್ನು ಸಾಧಿಸುವ ಶಕ್ತಿ ಅವರಲ್ಲಿದೆ ಎಂಬುದಕ್ಕೆ ಪಂಚಾಕ್ಷರ ಗವಾಯಿ ಮತ್ತು ಪುಟ್ಟರಾಜ ಗವಾಯಿಗಳೇ ಸಾಕ್ಷಿ ಎಂದು ಷಣ್ಮುಖಾರೂಢ ಮಠದ ಪೂಜ್ಯಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು ಬೆಂಗಳೂರು, ಇವರು ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ವಿಜಯಪುರ ಇವರ ಆಯೋಜನೆಯಲ್ಲಿ ಹಮ್ಮಿಕೊಂಡ 'ಅಖಿಲ ಕರ್ನಾಟಕ ಅಂಧರ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ ವಿಜಯಪುರದಲ್ಲಿ ಹಮ್ಮಿಕೊಂಡಿರುವುದು ಇತಿಹಾಸದಲ್ಲಿ ಬರೆದಿಡುವಂತಹದ್ದು, ಸಾಮಾನ್ಯರಿಗಿಂತ ವಿಶಿಷ್ಟ ಸಾಹಿತ್ಯ ರಚಿಸಿದ ಅಂಧರ ಸಾಹಿತ್ಯ ಪ್ರತಿಭೆ ಅನಾವರಣಗೊಂಡಿರುವುದು ಶ್ಲಾಘನೀಯ ಎಂದರು.
ಜ್ಞಾನ ಯೋಗಶ್ರಮದ ಪ. ಪೂ ಬಸವಲಿಂಗ ಸ್ವಾಮಿಗಳು ಮಾತನಾಡಿ ಅಂಧರ ಸಾಹಿತ್ಯವನ್ನು ಪ್ರಕಟಿಸುವ ಕೆಲಸ ಸಂಘ-ಸಂಸ್ಥೆಗಳು ಮಾಡಬೇಕು. ದೃಷ್ಟಿ ಇಲ್ಲದಿದ್ದರೂ ಒಳಗಿನ ಕಣ್ಣಿನ ಮೂಲಕ ಸಾಮಾಜಿಕ,ಆಧ್ಯಾತ್ಮಿಕ ಮೌಲ್ಯಗಳನ್ನು ಬಿತ್ತುವ ಸಾಹಿತ್ಯ ರಚಿಸಿದ ಅಂಧರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಗೋಷ್ಠಿ ಏರಿ್ಡಸಬೇಕು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಧಾರವಾಡ ಮನಗುಂಡಿ ಶ್ರೀ ಗುರು ಬಸವ ಮಹಾಮನೆಯ ಪೂಜ್ಯಶ್ರೀ ಬಸವಾನಂದ ಸ್ವಾಮೀಜಿ ಮಾತನಾಡಿ ಲೂಯಿಸ್ ಬ್ರೆಲ್ ಗಿಂತ ಮುಂಚೆಯೇ ನಮ್ಮ ಭಾರತದಲ್ಲಿ ಸೂರದಾಸರು ಸಾಹಿತ್ಯ ರಚಿಸಿದರು. ಅಂಧರಲ್ಲಿಯ ವಿಶೇಷ ಶಕ್ತಿಯನ್ನು ಕವನಗಳ ಮೂಲಕ ಸಮಾಜಕ್ಕೆ ಬಿತ್ತರಿಸುತ್ತಿರುವ ಈ ಸಮ್ಮೇಳನವು ವಿಜಯಪುರ ಇತಿಹಾಸದಲ್ಲೇ ಅಜರಾಮರ ವಾಗಲಿದೆ ಎಂದರು.
ಗೋಷ್ಠಿ ಒಂದರಲ್ಲಿ ಸಾಹಿತ್ಯ ಸಂಗೀತ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಪುಟ್ಟರಾಜ ಗವಾಯಿಗಳ ಕೊಡುಗೆ ಕುರಿತು ಡಾ. ನಾಗಶೆಟ್ಟಿ ಗಾರಂಪಳ್ಳಿ. ಎರಡನೇ ಗೋಷ್ಠಿ ಯಲ್ಲಿ ಹೊಸಗನ್ನಡ ಸಾಹಿತ್ಯ ಲೋಕಕ್ಕೆ ಅಂಧ ಬರಹಗಾರರ ಕೊಡುಗೆ ಕುರಿತು ಡಾ.ವಡ್ಡಗೆರೆ ನಾಗರಾಜಯ್ಯ, ಪ್ರೊ. ದೊಡ್ಡೇಗೌಡರು ವೆಂಕಣ್ಣ, ಗೋಷ್ಠಿ ಮೂರರಲ್ಲಿ ಬ್ರೈಲ್ ಪ್ರಸ್ತುತ ಸವಾಲುಗಳು ಮತ್ತು ಆಧುನಿಕ ಆವಿಷ್ಕಾರಗಳ ಕುರಿತು ರಾಜೇಶ್ ಕಿಣಿ ವಿಶೇಷ ಉಪನ್ಯಾಸ ನೀಡಿದರು.
ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 20 ಕವಿಗಳು ಸ್ವರಚಿತ ಕವನ ವಾಚಿಸಿದರು. ನಾಡಿನ ಹಿರಿಯ ಗಾಯಕ ಫಕೀರೇಶ್ ಕಣವಿ, ಸಮಾಜ ಸೇವಕ ಕೆ.ಎಂ.ನಿತ್ಯಾನಂದ,ಜಾನಪದ ಕಲಾವಿದ ನರಸಿಂಹಲು, ಸ್ವಯಂಸೇವಕಿ ಶಾರದಾ, ವೈದ್ಯ ಸುನಿಲ್ ಗೋಖಲೆ, ಅಂಥ ಮಕ್ಕಳ ಶಾಲೆಯ ಸಂಸ್ಥಾಪಕ ಎಂ.ಬಿ. ಉದುಪುಡಿ ಇವರನ್ನು ಸನ್ಮಾನಿಸಲಾಯಿತು. ನಾಡಿನ ಹಿರಿಯ ಸಂಗೀತ ವಿದ್ವಾಂಸ ಡಾ. ಸಿದ್ದರಾಮಯ್ಯ ಪೊಲೀಸ್ ಪಾಟೀಲ್ ಹಾಗೂ ಕುಮಾರಿ ಕೃತಿಕಾ ಜಂಗಿನ್ಮಟ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಗಾನಬನದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪಂಡಿತ್ ತೋಂಟದಾರ್ಯ ಕವಿ ಗವಾಯಿಗಳು ಸ್ವಾಗತಿಸಿದರು. ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ ಅಧ್ಯಕ್ಷ ಮುದುಗೆರೆ ರಮೇಶ್ ಕುಮಾರ್ ಆಸೆಯ ನುಡಿ ಗಳನ್ನಾಡಿದರು. ಕೋಶಾಧ್ಯಕ್ಷ ಆರ್. ಎಸ್.ಶಾಂತರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತ್ರಾ ಟಿ. ಮತ್ತು ಚಿದಾನಂದ ಜಡಿಮಠ ನಿರೂಪಿಸಿದರು. ಎಂ. ಕೇಶವಮೂರ್ತಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಚ್. ಹಿರೇಮಠ್, ಆನಂದ್ ಮುಳ್ಸಾವಳಗಿ,ಡಾ. ಪಿ.ವಿ. ನಾಗರಾಜ್,ಡಾ. ಕೃಷ್ಣ ಹೊಂಬಾಳ್, ನಾಗಯ್ಯ ಹಿರೇಮಠ,ಪಂಚಾಕ್ಷರಿ ಶಿರೋಳ್ ಮಠ,ವಿಜಯ್ ಕುಮಾರ್ ಕೋತ್ವಾಲ್, ಬಿ.ಎಸ್. ಬಿರಾದಾರ್, ಡಾ. ವಿಜಯಕುಮಾರ್ ಪೂಜಾರಿ, ಮಲ್ಲಿಕಾರ್ಜುನ ಹಿರೇಮಠ ಹಾಗೂ ನಾಡಿನ ವಿವಿಧ ಕಡೆಯಿಂದ ಆಗಮಿಸಿದ ಅಂಧ ಸಾಹಿತಿಗಳು, ಕವಿಗಳು ಉಪಸ್ಥಿತರಿದ್ದರು.