ವೈದ್ಯಕೀಯ ದಾಖಲೆಗಳ ಮೇಲೆ ರೋಗಿಗಳಿಗೆ ಸಂಚಾರಕ್ಕೆ ಅವಕಾಶ ಕೊಡಿ: ಸಿದ್ದರಾಮಯ್ಯ

ಬೆಂಗಳೂರು, ಏ 25,ಲಾಕ್ ಡೌನ್ ಸಂದರ್ಭದಲ್ಲಿ  24 ಗಂಟೆಗಳ ಅವಧಿಗೆ ನೀಡುವ ಪಾಸ್ ಗಳ ಅವಾಸ್ತವಿಕ ವಿಧಾನ  ಕೈಬಿಟ್ಟು ರೋಗಿಗಳು ಮತ್ತು ಅವರ ಸಂಬಂಧಿಕರ ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ಆಸ್ಪತ್ರೆಗಳಿಗೆ ಸಂಚರಿಸಲು ಮುಕ್ತ ಅವಕಾಶ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಈ ಸಂಬಂಧ ಜಿಲ್ಲಾಡಳಿತಗಳಿಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.ಕಿಡ್ನಿ, ಕ್ಯಾನ್ಸರ್, ಹೃದಯ ಮುಂತಾದ ಮಾರಕ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಅವರ ಸಂಬಂಧಿಕರುಗಳಿಗೆ ಆಸ್ಪತ್ರೆಗಳಿಗೆ ಹೋಗಿ ಬರಲು ಅವಕಾಶ ನೀಡುತ್ತಿಲ್ಲ. ಪೊಲೀಸರು ಮತ್ತು ಇತರೆ ಅಧಿಕಾರಿಗಳು ತೊಂದರೆ ನೀಡುತ್ತಿದಾರೆ ಎಂಬ ದೂರುಗಳುಬರುತ್ತಿವೆ. ಈ ಸಂಬಂಧ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದಾರೆ.  ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ  ಮಣಿಪಾಲದ ಆಸ್ಪತ್ರೆಗಳಿಗೆ ಹೋಗಬೇಕಾದರೆ ಅಲ್ಲಿ ಪರವಾನಗಿ ಪತ್ರಗಳನ್ನು ನೀಡುವಲ್ಲಿ ವಿಪರೀತ ಸಮಸ್ಯೆಗಳಾಗುತ್ತಿವೆ ಎಂಬ ದೂರುಗಳಿವೆ. ಸರ್ಕಾರ ಪಾಸ್ ನೀಡುವ ಅವಾಸ್ತವಿಕ ವಿಧಾನವನ್ನು ಕೈಬಿಟ್ಟು ದೂರದ ಊರುಗಳ ಆಸ್ಪತ್ರೆಗೆ ಓಡಾಡಲು ರೋಗಿಗಳಿಗೆ ಮುಕ್ತ ಅವಕಾಶ ನೀಡಬೇಕು ಎಂದಿದ್ದಾರೆ.