ಬೆಂಗಳೂರು, ಏಪ್ರಿಲ್ 19,ಲಾಕ್ ಡೌನ್ ಸಮಯದಲ್ಲಿ ಅಗತ್ಯ ಕರ್ತವ್ಯಗಳಿಗಾಗಿ ವ್ಯಕ್ತಿಗಳು ಮತ್ತು ವಾಹನಗಳ ಸಂಚಾರಕ್ಕಾಗಿ ನೀಡಲಾದ ಪಾಸ್‌ಗಳ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ತುರ್ತು ಪಾಸ್, ಬೇಕಾಬಿಟ್ಟಿ ಸುತ್ತಾಡಲು ನೀಡಿರುವ ಪರವಾನಗಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೀಡಲಾದ ಎಲ್ಲಾ ಪಾಸ್‌ಗಳು ಮೇ 3 ರವರೆಗೆ ಮಾನ್ಯವಾಗಿರುತ್ತವೆ ಎಂದು ತಿಳಿಸಿರುವ ಅವರು, ತುರ್ತು ದಿನದ ಪಾಸ್‌ಗಳನ್ನು ಹೊರತುಪಡಿಸಿ ಬೆಂಗಳೂರು ಪೊಲೀಸರು ಯಾವುದೇ ಹೊಸ ಪಾಸ್‌ಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಎಲೆಕ್ಟ್ರಾನಿಕ್ / ಭೌತಿಕ ಸೇರಿ ಎಲ್ಲಾ ಪಾಸ್‌ಗಳು ಮೇ 3 ರವರೆಗೆ ಮಾನ್ಯವಾಗಿರುತ್ತದೆ. (ಬೆಂಗಳೂರು ಆಯುಕ್ತರು) ಹೆಚ್ಚಿನ ಪಾಸ್‌ಗಳನ್ನು ನೀಡಬೇಕಾಗಿಲ್ಲ. ಕೇವಲ ಪಾಸ್ ಹೊಂದಿದ್ದ ಮಾತ್ರಕ್ಕೆ ಅದು ಎಲ್ಲೆಂದರಲ್ಲಿ ಸುತ್ತಾಡಲು ನೀಡಿರುವ ಪರವಾನಗಿ ಅಲ್ಲ. ಸರ್ಕಾರವು ವ್ಯಾಖ್ಯಾನಿಸಿದಂತೆ ಅಗತ್ಯ ಕರ್ತವ್ಯಗಳಿಗಾಗಿ ಪಾಸ್ ಅನ್ನು ನೀಡಲಾಗುತ್ತದೆ. ಒಂದು ವೇಳೆ ಪಾಸ್ ದುರುಪಯೋಗವಾದರೆ, ಅದನ್ನು ರದ್ದುಪಡಿಸುವ ಮತ್ತು ದಂಡ ವಿಧಿಸುವುದಕ್ಕೆ ಕಾರಣವಾಗುತ್ತದೆ ”ಎಂದು ಕರ್ನಾಟಕ ಡಿಜಿಪಿ ಟ್ವೀಟ್ ಮಾಡಿದ್ದಾರೆ.
ಆದಾಗ್ಯೂ, ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತುರ್ತು ದಿನದ ಪಾಸ್‌ಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ."ಒಂದು ಬಾರಿಗೆ / ಒಂದು ದಿನಕ್ಕೆ / ವೈದ್ಯಕೀಯ ತುರ್ತು / ಮಗುವಿನ ಜನನ / ತಕ್ಷಣದ ಕುಟುಂಬ ಸದಸ್ಯರ ನಿಧನಕ್ಕಾಗಿ ಅಂತಾರಾಜ್ಯ ಪಾಸ್ ಗಾಗಿ ವೈದ್ಯಕೀಯ ದಾಖಲೆಯೊಂದಿಗೆ 22942300/2400/2500 ಗೆ ಕರೆ ಮಾಡಿ ಪಡೆಯಬಹುದು. ಕುಟುಂಬಗಳನ್ನು ಒಂದುಗೂಡಿಸಲು ನಾವು ನಮ್ಮ ಕೈಲಾದ ಪ್ರಯತ್ನ ಮಾಡುತ್ತೇವೆ ”ಎಂದು ಡಿಜಿಪಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅಗತ್ಯ ವಸ್ತುಗಳ ತಡೆರಹಿತ ಸೇವೆಗಾಗಿ ನಗರ ಪೊಲೀಸರು ಎರಡು ಲಕ್ಷ ಪಾಸ್‌ಗಳನ್ನು ನೀಡಿದ್ದು, ಸುಮಾರು 56 ಲಕ್ಷ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.