ಬೆಂಗಳೂರು, ಏ.30, 50 ಕೋಟಿ ರೂ.ಯ ಎಪಿಎಂಸಿ ಹಗರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು 12 ಮಂದಿ ಆರೋಪಿಗಳ ವಿರುದ್ಧ ಇಂದು ನ್ಯಾಯಾಲಯಕ್ಕೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಕೃಷಿ ಮಾರುಕಟ್ಟೆ ಮಂಡಳಿಯ ಉಪ ಪ್ರಧಾನ ವ್ಯವಸ್ಥಾಪಕ ಸಿದ್ದಗಂಗಯ್ಯ, ಸಿಂಡಿಕೇಟ್ ಬ್ಯಾಂಕಿನ ಉತ್ತರ ಹಳ್ಳಿ ಶಾಖೆಯ ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ 12 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಸ್ತುತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಎಪಿಎಂಸಿಯ ಹಣವನ್ನು ಎಫ್‌ಡಿಯಲ್ಲಿ ಇಟ್ಟಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಲಾಗಿತ್ತು. ಆದರೆ ಈ ಹಣವನ್ನು ಚಾಲ್ತಿ ಖಾತೆಯಲ್ಲಿ ಇಟ್ಟು ಅವ್ಯವಹಾರ ನಡೆದಿದೆ. ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾತ್ತು. ಬಳಿಕ ಅದನ್ನು ಗೃಹ ಸಚಿವರ ಸೂಚನೆ ಮೇರೆಗೆ ಸಿಸಿಬಿಗೆ ವರ್ಗಾಯಿಸಲಾಗಿತ್ತು. 1400 ಪುಟಗಳ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿ ಪುನೀತ್ ಸಲ್ಲಿಸಿದ್ದಾರೆ ಎಂದು ಸಿಬಿಐ ಜಂಟಿ ಪೊಲೀಸ್ ಆಯುಕ್ತ ಸಂದೀಪ ಪಾಟೀಲ್ ತಿಳಿಸಿದ್ದಾರೆ. ಜಯರಾಮ್, ಮಂಡಳಿಯ ಭರತ್, ಮುಸ್ತಫಾ, ಮಹಮ್ಮದ್ ಅಸ್ಲಾಂ, ರೇವಣ್ಣ, ಮಂಡಳಿಯ ನಿವೃತ್ತ ಉಪ ನಿಯಂತ್ರಕ ಲಕ್ಷ್ಮಣ ಹಾಗೂ ಆಂಧ್ರ ಬ್ಯಾಂಕಿನ ವ್ಯವಸ್ಥಾಪಕ ಸಿರಿಲ್ ಲಕ್ಷ್ಮಣ, ಸಿರಿಲ್ ಅವರನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಅವರು ನೀಡಿದ ದೂರಿನ ಆಧಾರದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಡಳಿಯ ಆವರ್ತನಿಧಿಯಿಂದ ನಿಶ್ಚಿತ ಠೇವಣಿ (ಎಫ್.ಡಿ) ಇಡುವ ಸಲುವಾಗಿ ಬ್ಯಾಂಕ್‌ಗಳಿಂದ ಕೊಟೇಷನ್ ಕೇಳಲಾಗಿತ್ತು. ಈ ವೇಳೆ ಸಿಂಡಿಕೇಟ್ ಬ್ಯಾಂಕ್ ಉತ್ತರಹಳ್ಳಿ ಶಾಖೆಯು ಎಫ್.ಡಿ ಹೂಡಿಕೆಗೆ ಹೆಚ್ಚು ಬಡ್ಡಿ ನೀಡುವುದಾಗಿ ತಿಳಿಸಿತ್ತು. ರಾಜ್ಯ ಕೃಷಿ ಮಾರಾಟ ಮಂಡಳಿ ಆವರ್ತನಿಧಿ ಇರುವ ರಾಜಾಜಿನಗರ ಶಾಖೆಯ ಆಂಧ್ರ ಬ್ಯಾಂಕಿನಿಂದ ಆರ್‌ಟಿಜಿಎಸ್ ಮೂಲಕ 100 ಕೋಟಿ ರೂ. ಹಣವನ್ನು ಸಿಂಡಿಕೇಟ್ ಬ್ಯಾಂಕಿನ ಉತ್ತರಹಳ್ಳಿ ಶಾಖೆಗೆ ವರ್ಗಾವಣೆ ಮಾಡಿ ತಲಾ 50 ಕೋಟಿಯಂತೆ ಎರಡು ನಿಶ್ಚಿತ ಠೇವಣಿ ಇಡಲಾಗಿತ್ತು. ಜ. 20ರಂದು ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಿದಾಗ 52 ಕೋಟಿ ರೂಪಾಯಿ ಎಫ್‌ಡಿ ಹೂಡಿಕೆಗೆ ದಾಖಲಾತಿ ಕೊಟ್ಟಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ಈ ಹಿಂದೆ ನೀಡಿದ್ದ ಎಫ್‌ಡಿ ಹೂಡಿಕೆಗಳ ಎರಡು ಪ್ರತ್ಯೇಕ ಸಂಖ್ಯೆಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ. ಮಾತ್ರವಲ್ಲ 48 ಕೋಟಿ ಹಣಕ್ಕೆ ಲೆಕ್ಕ ಕೊಡುತ್ತಿಲ್ಲ. ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶ ಕರಿಗೌಡ ದೂರಿನಲ್ಲಿ ತಿಳಿಸಿದ್ದರು.
ಮಂಡಳಿಗೆ ಸಂಬಂಧಿಸಿ 100 ಕೋಟಿಯನ್ನು ಸಿಂಡಿಕೇಟ್ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇರಿಸುವ ಬದಲು ವ್ಯವಸ್ಥಾಪಕ ಮಂಜುನಾಥ್ ಮತ್ತು ಅದೇ ಬ್ಯಾಂಕಿನ ಉಪ ವ್ಯವಸ್ಥಾಪಕ ಜಯರಾಮ್ ಅವರು ಮಂಡಳಿಯ ಫೈನಾನ್ಸ್ ಅಧಿಕಾರಿ ಹುದ್ದೆಯನ್ನು ಮಹಮ್ಮದ್ ಮುಸ್ತಫಾ ಎಂಬ ವ್ಯಕ್ತಿಯ ಹೆಸರಿನಲ್ಲಿ ನಕಲಿಯಾಗಿ ಸೃಷ್ಟಿಸಿ, ಆ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆದು ಅನಧಿಕೃತವಾಗಿ ಹಣ ವರ್ಗಾವಣೆ ಮಾಡಿದ್ದರು. ಬಳಿಕ, ಈ 100 ಕೋಟಿಯಲ್ಲಿ 48 ಕೋಟಿಯನ್ನು ಚೆನ್ನೈ ನಗರದ 106 ಇತರ ಚಾಲ್ತಿ ಖಾತೆಗಳಿಗೆ ವಿವಿಧ ಹಂತಗಳಲ್ಲಿ ವರ್ಗಾವಣೆ ಮಾಡಿರುವುದು ಸಿಸಿಬಿ ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.