ಮೈಸೂರು, ಏ.24, ಪಾದರಾಯನಪುರ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿರುವುದರ ಹಿಂದೆ ಎಡಿಜಿಪಿಯೊಬ್ಬರ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರ ಘಟನೆಯ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರಿಸಿರುವುದು ಕೂಡ ಅವಿವೇಕತನದ ನಿರ್ಧಾರವಾಗಿದೆ. ಈ ಬಗ್ಗೆ ಈಗಾಗಲೇ ಎರಡೆರಡು ಬಾರಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಮಾತನಾಡಿ ಈ ಅನಾಹುತವನ್ನು ಸರಿಪಡಿಸುವಂತೆ ಒತ್ತಾಯಿಸಿದ್ದೇನೆ. ಇಂತಹ ಅವಿವೇಕತನದ ಸಲಹೆಯನ್ನು ಯಾರು ಕೊಟ್ಟಿದ್ದಾರೋ ಗೊತ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳನ್ನು ಇಡಲು ಸಾಧ್ಯವಿಲ್ಲ ಎಂದು ಸ್ವತಃ ಎಡಿಜಿಪಿ ನ್ಯಾಯಾಲಯಕ್ಕೆ ಹೇಳಿದ್ದಾರೆ ಎಂಬ ಮಾಹಿತಿ ಇದೆ. ರೆಡ್ ಝೋನ್‌ನಲ್ಲಿರುವ ಬೆಂಗಳೂರಿನಿಂದ ಗ್ರೀನ್ ಝೋನ್‌ನಲ್ಲಿರುವ ರಾಮನಗರಕ್ಕೆ ಶಂಕಿತ ಕೋವಿಡ್ ಸೋಂಕಿತರನ್ನು ಸ್ಥಳಾಂತರ ಮಾಡಿರುವುದು ಸರಿಯಲ್ಲ. ರಾಮನಗರಕ್ಕೆ ಸ್ಥಳಾಂತರ ಮಾಡುವುದರ ಬದಲು ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ 1500 ಬೆಡ್‌ಗಳಲ್ಲಿ ಐಸೋಲೇಷನ್‌ನಲ್ಲಿ ಇಡಬೇಕಾಗಿತ್ತು. ಅಧಿಕಾರಿಗಳು ಸರ್ಕಾರವನ್ನು ದಾರಿ ತಪ್ಪಿಸುತ್ತಿದ್ದಾರೆ. ತಪ್ಪನ್ನು ಸರಿಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಭರವಸೆ ನೀಡಿದ್ದಾರೆ. ಆದರೆ ಇನ್ನೂ ಈಡೇರಿಲ್ಲ. ಸ್ಥಳಾಂತರ ಮಾಡಲು ಬಂದಿದ್ದ ವಾಹನವನ್ನು ಎಡಿಜಿಪಿ ಹಿಂದಕ್ಕೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಎರಡು ಹಂತಗಳಲ್ಲಿ ಕೈದಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಮೊದಲ ಹಂತದಲ್ಲಿ 49 ಆರೋಪಿಗಳು, ಎರಡನೇ ಹಂತದಲ್ಲಿ 72 ಮಂದಿಯನ್ನು ಯಾವುದೇ ವೈದ್ಯಕೀಯ ತಪಾಸಣೆ ನಡೆಸದೆ ಸ್ಥಳಾಂತರ ಮಾಡಲಾಗಿದೆ. ಅವರಿಗೆ ಒಂದೇ ಶೌಚಾಲಯ, ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತ ಇಬ್ಬರನ್ನು ಐವರು ಪೊಲೀಸರು ಪೊಲೀಸ್ ವಾಹನದಲ್ಲಿ ಯಾವುದೇ ಮುಂಜಾಗೃತಾ ಕ್ರಮಕೈಗೊಳ್ಳದೆ ಸ್ಥಳಾಂತರ ಮಾಡಿದ್ದಾರೆ. ಇದೀಗ ಅಧಿಕಾರಿಗಳಲ್ಲೂ ಸೋಂಕಿನ ಬಗ್ಗೆ ಆತಂಕ ಉಂಟಾಗಿದೆ. ಆದ್ದರಿಂದ ಇಡೀ ಜೈಲನ್ನು ಸೀಲ್ ಡೌನ್ ಮಾಡಿ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಬೇಕು ಎಂದು ಹೇಳಿದರು.
ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರ ತಪ್ಪಿಸಲು ಬಿಡದಿಯಲ್ಲಿ ರಸ್ತೆ ತಡೆ ನಡೆಸಲು ಸ್ಥಳೀಯರು ನಿರ್ಧರಿಸಿದ್ದರು. ಆದರೆ ತಾವು ಅವರನ್ನು ತಡೆದು ಸರ್ಕಾರಕ್ಕೆ ಆಗುತ್ತಿದ್ದ ಮುಜುಗರವನ್ನು ತಪ್ಪಿಸಿದ್ದೆ. ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂಬ ಉದ್ದೇಶದಿಂದ ಈ ತೀರ್ಮಾನ ಮಾಡಿದ್ದೆ. ಆರೋಗ್ಯ ಇಲಾಖೆ ಕೂಡ ಆರೋಪಿಗಳನ್ನು ಇಲ್ಲಿಂದ ಸ್ಥಳಾಂತರ ಮಾಡುವಂತೆ ಸಲಹೆ ನೀಡಿದೆ ಎಂದರು.
ಮಾದೇಶ್ವರ ನರ್ಸಿಂಗ್ ಹೊಂನಲ್ಲಿ ಪಾಸಿಟಿವ್ ಸೋಂಕಿತ ಇರುವುದರ ಬಗ್ಗೆ ಮಾಹಿತಿ ಪಡೆಯಲು ಆರೋಗ್ಯ ಸಿಬ್ಬಂದಿ ಹೋದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸಲಾಗಿದೆ. ಈಗಲೂ ಅವರು ಭಯದಿಂದ ಹೊರಬಂದಿಲ್ಲ. ಅವರ ಹೇಳಿಕೆಯನ್ನು ಗಮನಿಸಿದಾಗ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿರುವುದು ಮನದಟ್ಟಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ಆಸ್ಪತ್ರೆಯ ಕಂಪ್ಯೂಟರ್ ಆಪರೇಟರ್ ಅವಿನಾಶ್ ಮತ್ತು ಅವರ ತಂದೆ, ನರ್ಸ್ ಲಕ್ಷ್ಮೀ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲ ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಮಹಿಳೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ದೇವರ ದಯೆಯಿಂದ ಈಗ ಬದುಕುಳಿದಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಆಶಾ ಕಾರ್ಯಕರ್ತರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿರುವ ಪ್ರಕರಣ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಎರಡು ಪ್ರಕರಣ ಈಗಾಗಲೇ ನಡೆದಿದ್ದು, ಇದು ಮೂರನೇ ಪ್ರಕರಣವಾಗಿದೆ. ಹಲ್ಲೆ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಲು 7 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಕೇಂದ್ರ ಸರ್ಕಾರ, ಮೂರು ವರ್ಷ ಶಿಕ್ಷೆ ವಿಧಿಸುವ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇಂತಹ ಘಟನೆ ನಡೆಯದಂತೆ ಆರೋಪಿಗಳ ಹೆಡೆಮುರಿ ಕಟ್ಟುತ್ತೇವೆ ಎಂದು ಸರ್ಕಾರಗಳು ಮಾಧ್ಯಮಗಳ ಮುಂದೆ ಕೇವಲ ಹೇಳಿಕೆ ನೀಡುತ್ತಿದೆಯೇ ಹೊರತು ಆರೋಗ್ಯ ಮತ್ತು ಆಶಾ ಕಾರ್ಯಕರ್ತರಿಗೆ ರಕ್ಷಣೆ ಕೊಡುವ ಕೆಲಸ ನಡೆಯುತ್ತಿಲ್ಲ ಎಂದು ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಡೆತ್‌ನೋಟ್‌ನಲ್ಲಿ ಹೆಸರು ಇರುವ ಆರೋಪಿಗಳನ್ನು ಠಾಣೆಗೆ ಕರೆಸಿ ಬಿಟ್ಟು ಕಳುಹಿಸಲಾಗಿದೆ. ಮಹಿಳೆ ಇನ್ನೂ ಮಾನಸಿಕ ಒತ್ತಡದಿಂದ ಹೊರಬಂದಿಲ್ಲ. ಅವರಿಗೆ ಕೌನ್ಸಿಲಿಂಗ್ ನಡೆಸುವ ಅಗತ್ಯವಿದೆ. ಮ್ಯಾಜಿಸ್ಟ್ರೇಟ್ ಹೇಳಿದ ಮೇಲೂ ಆರೋಪಿಗಳನ್ನು ಬಿಟ್ಟು ಕಳುಹಿಸಿರುವುದನ್ನು ಗಮನಿಸಿದರೆ ಇದರ ಹಿಂದೆ ರಾಜಕೀಯ ಒತ್ತಡ ಇರುವುದು ಮನದಟ್ಟಾಗುತ್ತಿದೆ. ಅಧಿಕಾರಿಗಳು ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕೆ ಹೊರತು ರಾಜಕೀಯ ಒತ್ತಡದಿಂದಲ್ಲ. ಈ ಮಧ್ಯೆ ಮಂಡ್ಯ ಜಿಲ್ಲಾಧಿಕಾರಿಯವರೇ ಸ್ವತಃ, ಸಂತ್ರಸ್ತ ಕುಟುಂಬಕ್ಕೆ ದೂರು ನೀಡುವುದು ಬೇಡ, ಮಾತುಕತೆಯಲ್ಲಿ ಬಗೆಹರಿಸೋಣ ಎಂದು ಹೇಳಿದ್ದಾರೆ. ಇಂತಹ ಅಧಿಕಾರಿಗಳಿಂದಾಗಿ ಸರ್ಕಾರ ಪದೇ ಪದೇ ಮುಜುಗರಕ್ಕೆ ಒಳಗಾಗುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ತಕ್ಷಣ ಮುಖ್ಯಮಂತ್ರಿ ಕ್ರಮಕೈಗೊಂಡು ಸರ್ಕಾರ ಇನ್ನಷ್ಟು ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಬೇಕು. ಈ ಮೂಲಕ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರದಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಆದರೆ ಸರ್ಕಾರ ಯಾವುದೇ ಇಂತಹ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆಗೆ ಮಾತ್ರ ಸೀಮಿತವಾಗಿದೆ ಎಂದು ಕಿಡಿಕಾರಿದರು.