ಬೆಂಗಳೂರು, ಮೇ 1,ಹಸಿರು ವಲಯಗಳಲ್ಲಿ ಬಸ್ ಸೇವೆ ಪುನಾರಂಭಿಸುವ ಬಗ್ಗೆ ಇಂದು ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಯಾಣದ ವೇಳೆಯಲ್ಲಿ ಕೊರೋನಾ ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಈಗಾಗಲೇ ನಾಲ್ಕು ಸಾರಿಗೆ ನಿಗಮಗಳಿಗೆ ಸೂಚಿಸಲಾಗಿದೆ. ಸಾರಿಗೆ ಇಲಾಖೆಯ ಉನ್ನತ ಮಟ್ಟದ ಸಭೆ ಇಂದು ನಡೆಯಲಿದ್ದು, ಆ ಸಭೆಯಲ್ಲಿ ಎಷ್ಟು ಬಸ್, ಯಾವ ರೀತಿ ಬಸ್ ಸೌಲಭ್ಯ ಒದಗಿಸಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.ಸೋಮವಾರದಿಂದ ಹಸಿರು ವಲಯಗಳಲ್ಲಿ ಬಸ್ ಸೇವೆ ಒದಗಿಸುವ ಉದ್ದೇಶವಿದ್ದು, ಬಸ್ ಸೇವೆ ಯಾವ ರೀತಿ ಕಲ್ಪಿಸಬೇಕು ಎಂಬ ರೂಪುರೇಷೆಗಳನ್ನು ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಸ್ ನಿಲ್ದಾಣಗಳಿಗೆ ಪ್ರಯಾಣಿಕರು ಆಗಮಿಸಲು ಮತ್ತು ನಿರ್ಗಮಿಸಲು ಒಂದೇ ದ್ವಾರದಲ್ಲಿ ಮಾತ್ರ ಅವಕಾಶವಿರುತ್ತದೆ. ಬಸ್ ನಿಲ್ದಾಣಗಳಲ್ಲಿ ಸೋಂಕು ನಿವಾರಣೆಗೆ ಸ್ಯಾನಿಟೈಸರ್ ಕೂಡ ಮಾಡಲಾಗುತ್ತದೆ ಎಂದು ಮೂಲಗಳು.ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳ ಬೇಕಾಗಿದೆ. ಮೊದಲ ಹಂತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ 55 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳದಿರುವಂತೆ ಸೂಚಿಸಲಾಗಿದೆ.
ಕೊರೊನಾ ಹರಡುವುದನ್ನು ತಡೆಯುವ ಉದ್ದೇಶದಿಂದ ನಾಲ್ಕು ನಿಗಮಗಳ ಬಸ್ ನಿಲ್ಲಿಸಲಾಗಿತ್ತು. ಮಾರ್ಚ್ 22ರಿಂದ ಕೆಎಸ್ಆರ್‌ಟಿಸಿ ಬಸ್ ಸೇವೆ ನಿಲ್ಲಿಸಲಾಗಿದೆ. ಆನಂತರ ಅಗತ್ಯ ಸೇವೆಗಳಿಗೆ ಹಾಗೂ ಕಾರ್ಮಿಕರು ಅರವರ ಊರಿಗೆ ಹೋಗಲು ಬಸ್ ಒದಗಿಸಲಾಗಿದೆ. ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಅಗತ್ಯ ಸೇವೆಗೆ ಬಸ್ ಒದಗಿಸಿದ್ದವು. ಬಸ್ ಸೇವೆ ನಿಲ್ಲಿಸಿದ್ದರಿಂದ ಕೋಟ್ಯಂತರ ರೂ. ನಷ್ಟ ಅನುಭವಿಸುತ್ತಿವೆ. ಈ ಮಧ್ಯೆ ನಿನ್ನೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಲಾಖೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಪರಿಸ್ಥಿತಿ ಸಂಕಷ್ಟಮಯವಾಗಿದ್ದು, ಯಾವುದೇ ಸವಾಲು ಎದುರಿಸಲು ಸಿದ್ಧರಾಗಿರುವಂತೆ ಸೂಚಿಸಿದ್ದಾರೆ.