ಡಿ.31ಕ್ಕೆ ತಾಳಿಕೋಟಿ ಸಂಪೂರ್ಣ ಬಂದ್ ಗೆ ನಿರ್ಧಾರ

A preliminary meeting of office-bearers of pro-Dalit organization coalition

ದಲಿತ ಪರ ಸಂಘಟನೆ ಒಕ್ಕೂಟದ ಪದಾಧಿಕಾರಿಗಳ ಪೂರ್ವಭಾವಿ ಸಭೆ  

ತಾಳಿಕೋಟಿ 29: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್‌. ಅಂಬೇಡ್ಕರ್ ಅವರ ಕುರಿತು ಸಂಸತ್ತಿನಲ್ಲಿ ಆಡಿದ ಅವಮಾನಕರ ಮಾತುಗಳನ್ನು ಖಂಡಿಸಿ ಡಿ. 31ರಂದು ತಾಳಿಕೋಟಿ ಸಂಪೂರ್ಣ ಬಂದ್ ನಡೆಸಲು ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.  

ರವಿವಾರ ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್ ಭವನದಲ್ಲಿ ನಡೆದ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಡಿಸೆಂಬರ್ 31ರ ತಾಳಿಕೋಟಿ ಬಂದ್ ಹಾಗೂ ಡಿ. 30ಕ್ಕೆ ವಿಜಯಪುರದಲ್ಲಿ ನಡೆಯುವ ಬಂದ್ ಪ್ರತಿಭಟನಾ ಕಾರ್ಯಕ್ರಮಕ್ಕೆ ಸಮರ್ಥನೆ ನೀಡುವುದರ ಕುರಿತು ಚರ್ಚಿಸಲಾಯಿತು.ಸಭೆಯಲ್ಲಿ ಪ್ರಾಚಾರ್ಯ ಡಾ.ಎಚ್‌.ಬಿ.ನಡುವಿನಕೇರಿ,ಮಾತನಾಡಿ ಗೃಹ ಸಚಿವ ಅಮಿತ್ ಶಾ ಅವರು ಬಾಬಾ ಸಾಹೇಬರ ಕುರಿತು ಸಂಸತ್ತಿನಲ್ಲಿ ಅವಮಾನಕರವಾಗಿ ಮಾತನಾಡಿದ್ದನ್ನು ಈ ಸಭೆ ಉಗ್ರವಾಗಿ ಖಂಡಿಸುತ್ತದೆ ಇದನ್ನು ನಾವೆಂದೂ ಸಹಿಸುವುದಿಲ್ಲ ಅಮಿತ್ ಶಾ ಅವರು ತಾವು ಆಡಿದ ಮಾತುಗಳಿಗಾಗಿ ದೇಶದ ಜನತೆಗೆ ಕ್ಷಮೆಯಾಚಿಸಬೇಕು ಹಾಗೂ ಮಾನ್ಯ ಪ್ರಧಾನ ಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂಬ ಬೇಡಿಕೆಯೊಂದಿಗೆ ನಾವು ಡಿಸೆಂಬರ್ 31 ರಂದು ಪಟ್ಟಣದ ಬಂದ್ ಗೆ ಕರೆ ನೀಡುತ್ತೇವೆ ಇದಕ್ಕೆ ಪಟ್ಟಣದ ಎಲ್ಲಾ ನಾಗರಿಕರು ಸಹಕರಿಸಬೇಕು. ಈ ಬಂದ್ ಮತ್ತು ಪ್ರತಿಭಟನೆಯು ಸಮಾಜದ ಮುಖಂಡರ ನೇತೃತ್ವದಲ್ಲಿ ಶಾಂತಿ ಪೂರ್ಣವಾಗಿ ನಡೆಯಲಿದೆ ಎಂದರು. ಡಿ.ಎಸ್‌.ಎಸ್‌. ಬೆಳಗಾವಿ ವಿಭಾಗೀಯ ಸಂಚಾಲಕ ದೇವೇಂದ್ರ ಹಾದಿಮನಿ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ ಮಾತನಾಡಿ ಇದು ಯಾರೋ ಅನಕ್ಷರಸ್ಥರು ಆಡಿದ ಮಾತಲ್ಲ ಈ ದೇಶದ ಉನ್ನತ ಸ್ಥಾನದಲ್ಲಿರುವ ಗೃಹ ಸಚಿವರು ಆಡಿದ ಮಾತು ಇದು ಸಹಿಸಲು ಸಾಧ್ಯವಿಲ್ಲ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಅವಮಾನವನ್ನು ನಾವೆಂದೂ ಸಹಿಸುವುದಿಲ್ಲ ಈ ಹೋರಾಟಕ್ಕೆ ಪಟ್ಟಣದ ನಾಗರಿಕರು, ವ್ಯಾಪಾರಸ್ಥರು ತಮ್ಮಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್ ಗೆ ಸಹಕರಿಸಬೇಕು, ತಾಲೂಕಿನ  ಎಲ್ಲಾ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು, ಸಮಾಜದ ಗಣ್ಯರು ಈ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. ಸಭೆಯ ನಿರ್ಣಯದಂತೆ ಡಿಸೆಂಬರ್ 31 ರಂದು ಪಟ್ಟಣದಲ್ಲಿ ಬೆಳಿಗ್ಗೆ 8-00 ರಿಂದ ಸಂಜೆ 6:00 ಘಂಟೆ ವರೆಗೆ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುವುದು ಹಾಗೂ ಅಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶ್ರೀ ಬಸವೇಶ್ವರ ವೃತ್ತದಲ್ಲಿ ಸೇರಿ ತಹಸಿಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದೆಂದು ನಿರ್ಧರಿಸಲಾಯಿತು.  

ಸಭೆಯಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷರಾದ ಎಸ್‌.ಬಿ.ಕಟ್ಟಿಮನಿ, ಅಧ್ಯಕ್ಷ ಮುತ್ತಪ್ಪ ಚಮಲಾಪೂರ, ಉಪಾಧ್ಯಕ್ಷ ಬಸವರಾಜ ಕಟ್ಟಿಮನಿ, ಶಂಕ್ರ​‍್ಪ ಕಟ್ಟಿಮನಿ (ಮೈಲೇಶ್ವರ), ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ನಾಗೇಶ್ ಕಟ್ಟಿಮನಿ, ಜೈಭೀಮ ಮುತ್ತಗಿ, ಮಹೇಶ ಚಲವಾದಿ, ರಾಮಣ್ಣ ಕಟ್ಟಿಮನಿ, ಗೌತಮ್ ಪತ್ತೇಪೂರ, ಕಾಶಿನಾಥ ಕಾರಗನೂರ, ಸಿದ್ದು ಬಾರಿಗಿಡದ, ಶರಣು ಬಂಟನೂರ, ಬಾಬು ಮಿಣಜಗಿ, ಪರಶು ಬಾಡಿಹಾಳ, ರವಿ ಕಟ್ಟಿಮನಿ, ಶಂಕರ ಪಡಸಾಲಿ ಮತ್ತಿತರರು ಇದ್ದರು.