ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿಯೇ ಪ್ರಭಲ ಮಾಧ್ಯಮ: ಅರವಿಂದ ಕುಲಕರ್ಣಿ
ಧಾರವಾಡ 01: ರಂಗಭೂಮಿ ಜೀವನದ ಪ್ರತಿಬಿಂಬ. ಅದು ಸದಾಕಾಲ ಜೀವಂತ ಕಲೆಯಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿಯೇ ಪ್ರಭಲ ಮಾಧ್ಯಮ ಎಂದು ಧಾರವಾಡದ ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಪೂಜ್ಯ ಶರಣ ಲಿಂ. ಗುರುಪಾದಪ್ಪ ದುಂಡಪ್ಪ ದೊಡವಾಡ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವ್ಯಕ್ತಿತ್ವ ವಿಕಸನದಲ್ಲಿ ರಂಗಭೂಮಿಯ ಪಾತ್ರ’ ವಿಷಯ ಕುರಿತು ಉಪನ್ಯಾಸ ನೀಡಿದರು.
ಜೀವನದಲ್ಲಿ ವ್ಯಕ್ತಿ ಮುಖ್ಯವಲ್ಲ. ಅವರ ವ್ಯಕ್ತಿತ್ವ ಮುಖ್ಯ. ವೇಷ, ಭೂಷಣಗಳಿಂದ ವ್ಯಕ್ತಿಯಿಂದ ಅಳೆಯಬಾರದು. ಅವನಲ್ಲಿರುವ ಹೃದಯವಂತಿಕೆಯ ಗುಣಗಳಿಂದ ವ್ಯಕ್ತಿತ್ವ ಅಳೆಯಬೇಕು. ವ್ಯಕ್ತಿ ಆಳಿದರೂ ಅವರ ವ್ಯಕ್ತಿತ್ವ ಎಂದು ಅಳಿಯುವದಿಲ್ಲ. ರಂಗಭೂಮಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ 52 ಪ್ರಧಾನ ಅಂಶಗಳಿವೆ. ಸಂವಹನಶೀಲತೆ, ಆತ್ಮವಿಶ್ವಾಸ, ನಾಯಕತ್ವದ ಗುಣ, ಸಕಾರಾತ್ಮಕ ಚಿಂತನೆ, ಸಮಯೋಚಿತ ಮಾತುಗಾರಿಕೆ, ಸೃಜನಶೀಲತೆ ಗುಣಗಳನ್ನು ಕಲಿಸುವ ಮಾಧ್ಯಮವೇ ರಂಗಭೂಮಿ.
ಸೋಲಿನಲ್ಲೂ ನಾನು ಗೆಲ್ಲಬಲ್ಲೆ ಎಂಬ ದೃಢ ಸಂಕಲ್ಪ ಶಕ್ತಿಯನ್ನು ರಂಗಭೂಮಿ ಕಲಿಸುತ್ತದೆ. ಸೌಂದರ್ಯ ಪ್ರಜ್ಞೆ, ಭಾಷಾ ಕೌಶಲ್ಯ, ಜೀವನ ಪಾಠವನ್ನು ಕಲಿಸುವ ಸಾಮರ್ಥ್ಯ ರಂಗಭೂಮಿಗೆ ಇದೆ. ವ್ಯಕ್ತಿತ್ವ ವಿಕಸನಕ್ಕೆ ಕೌಟುಂಬಿಕೆ ಹಿನ್ನೆಲೆ, ಪರಿಸರದ ಪ್ರಭಾವ, ಸಂಸ್ಕೃತಿ ಹಾಗೂ ಸಂಸ್ಕಾರಗಳೂ ಪ್ರಭಾವ ಬೀರುತ್ತವೆ. ಆದರೆ ಅಂತಹ ಮೌಲ್ಯಾಧಾರಿತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಹ ಸಾಮರ್ಥ್ಯ ನಮ್ಮಲ್ಲಿರಬೇಕು ಎಂದು ತಿಳಿಸಿದರು.
ಖ್ಯಾತ ಉದ್ದಿಮೆದಾರ ಸರಸಾನಂದ ದೊಡವಾಡ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳ ಪರವಾಗಿ ಕರಣ ದೊಡವಾಡ ದತ್ತಿ ಆಶಯ ಕುರಿತು ಮಾತನಾಡಿದರು.
ಅರವಿಂದ ಕುಲಕರ್ಣಿಯವರನ್ನು ದತ್ತಿ ದಾನಿಗಳ ಪರವಾಗಿ ಸನ್ಮಾನಿಸಲಾಯಿತು.
ವೀರಣ್ಣ ಒಡ್ಡೀನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ತ. ಅಮರಶೆಟ್ಟಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಸಿ.ಎಸ್. ಪಾಟೀಲ, ಸಿ.ಯು. ಬೆಳ್ಳಕ್ಕಿ, ಎಸ್.ಎಸ್. ಲಕ್ಷ್ಮೇಶ್ವರ, ಶಶಿ ದೊಡವಾಡ, ಗಂಗಮ್ಮ ದೊಡವಾಡ, ರಾಜೇಶ್ವರಿ ಹತ್ತಿಕಾಳ, ಬಿ.ಎಸ್. ತಾಳಿಕೋಟಿ ಸೇರಿದಂತೆ ಮುಂತಾದವರಿದ್ದರು.