ಕಳೆದ 5 ವರ್ಷಗಳಲ್ಲಿ ದೃಷ್ಟಿಕೇಂದ್ರ ಮತ್ತು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

Vision center and free eye checkup and surgery camp in last 5 years

ಕಳೆದ 5 ವರ್ಷಗಳಲ್ಲಿ ದೃಷ್ಟಿಕೇಂದ್ರ ಮತ್ತು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ 

ಹಾನಗಲ್ 1: ತಾಲೂಕಿನಲ್ಲಿ ಕಳೆದ 5 ವರ್ಷಗಳಲ್ಲಿ ದೃಷ್ಟಿಕೇಂದ್ರ ಮತ್ತು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಗಳ ಮೂಲಕ 30 ಸಾವಿರಕ್ಕೂ ಹೆಚ್ಚು ಜನರ ನೇತ್ರ ತಪಾಸಣೆ ಕೈಗೊಳ್ಳಲಾಗಿದ್ದು, 4,200 ಜನರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿ ದೃಷ್ಟಿಭಾಗ್ಯ ಮರಳಿಸಿದ ತೃಪ್ತಿ ಇದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

  ತಾಲೂಕಿನ ನರೇಗಲ್ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ತಮ್ಮ 50 ನೇ ಜನ್ಮ ವರ್ಷಾಚರಣೆ ಅಂಗವಾಗಿ ನಡೆಯುತ್ತಿರುವ ನಾನಾ ಸಮಾಜೋಪಯೋಗಿ ಕಾರ್ಯಕ್ರಮಗಳ ಪೈಕಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಬಡ ಮತ್ತು ಮಧ್ಯಮ ವರ್ಗಗಳಿಗೆ ಸೇರಿದ ಜನರು ದೂರದ ಹುಬ್ಬಳ್ಳಿ, ಶಿರಸಿ, ಹಾವೇರಿ ಸೇರಿದಂತೆ ಹಲವು ನಗರಗಳಿಗೆ ಚಿಕಿತ್ಸೆಗೆ ತೆರಳುತ್ತಾರೆ. ಹಣ ಮತ್ತು ಸಮಯ ವ್ಯಯ ಮಾಡುತ್ತಿದ್ದು, ಇದನ್ನು ತಪ್ಪಿಸಿ ಜನಸಾಮಾನ್ಯರಿಗೆ ಅನುಕೂಲವಾಗಲು ನಿಯಮಿತವಾಗಿ ತಾಲೂಕಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ, ತಜ್ಞರಿಂದ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಆರೋಗ್ಯ ಸೇವೆ ಹೀಗೆಯೇ ಮುಂದುವರೆಯಲಿದೆ ಎಂದರು. 

  ಟಿಎಚ್‌ಒ ಡಾ.ಲಿಂಗರಾಜ ಕೆ.ಜಿ. ಮಾತನಾಡಿ, ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ನೇತ್ರಗಳು ಬಹುಬೇಗ ಹಾಳಾಗುತ್ತಿವೆ. ನಿಯಮಿತವಾಗಿ ತಪಾಸಣೆಗೆ ಒಳಪಟ್ಟು ನೇತ್ರಗಳ ಸುರಕ್ಷತೆಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು.  

  ಶಿರಸಿಯ ರೋಟರಿ ಚಾರಿಟೇಬಲ್ ಆಸ್ಪತ್ರೆ ಹಾಗೂ ಟೀಂ ಆಪತ್ಬಾಂಧವ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ 220 ಕ್ಕೂ ಹೆಚ್ಚು ಜನರ ನೇತ್ರಗಳನ್ನು ತಪಾಸಣೆಗೆ ಒಳಪಡಿಸಿ, ಈ ಪೈಜಿ 96 ಜನರ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಗ್ರಾಪಂ ಅಧ್ಯಕ್ಷ ಭಾಷಾಸಾಬ ಗೌಂಡಿ, ಸದಸ್ಯರಾದ ಗುತ್ತೆಪ್ಪ ಹರಿಜನ, ಜಾಫರ್‌ಸಾಬ ಮುಲ್ಲಾ, ಹುಸೇನಮಿಯಾ ಸವಣೂರ, ಮಾಜಿ ಸದಸ್ಯ ಶಾಂತಪ್ಪ ಶೀಲವಂತರ, ಮಹಬಳೇಶ್ವರ​‍್ಪ ಸವಣೂರ, ತಾಪಂ ಮಾಜಿ ಸದಸ್ಯ ಕಲವೀರ​‍್ಪ ಪವಾಡಿ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್ ಮುಖಂಡರಾದ ಎಂ.ಎ.ನೆಗಳೂರ, ಚಮನಸಾಬ ಪಠಾಣ, ಫಕ್ಕೀರೇಶ ಮಾವಿನಮರದ, ಯಲ್ಲಪ್ಪ ನಿಂಬಣ್ಣನವರ, ಪ್ರಭು ಬಮ್ಮಣ್ಣನವರ, ಡಾ.ಫೈರೋಜ್ ಲೋಹಾರ ಸೇರಿದಂತೆ ಹಲವರಿದ್ದರು.