ಉದ್ಯೋಗ ಖಾತರಿ ಯೋಜನೆಯಡಿ ಏಪ್ರಿಲ್ 1 ರಿಂದ ಒಂದು ದಿನಕ್ಕೆ 370 ಕೂಲಿ ಜಾರಿಗೆ

370 per day wage to be implemented from April 1 under the employment guarantee scheme

ಉದ್ಯೋಗ ಖಾತರಿ ಯೋಜನೆಯಡಿ ಏಪ್ರಿಲ್ 1 ರಿಂದ ಒಂದು ದಿನಕ್ಕೆ 370 ಕೂಲಿ ಜಾರಿಗೆ 

ಹಾವೇರಿ 04 : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಏಪ್ರಿಲ್ 1 ರಿಂದ ಒಂದು ದಿನಕ್ಕೆ 370 ಕೂಲಿ ನಿಗದಿಪಡಿಸಲಾಗಿದೆ. ಈ ’ಯೋಜನೆಯಡಿ ಅರ್ಹ ನೋಂದಾಯಿತ ಕುಟುಂಬಗಳಿಗೆ ಕೇಂದ್ರ ಸರ್ಕಾರವು 349 ರಿಂದ 370ಕ್ಕೆ ಕೂಲಿ ದರ ಹೆಚ್ಚಿಸಿದೆ. ತಾಲೂಕಿನ ಎಲ್ಲಾ ಗ್ರಾಮದ ಅರ್ಹ ನೋಂದಾಯಿತ ಕೂಲಿ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ ಎಂದು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ  ನವೀನ್ ಪ್ರಸಾದ್ ಕಟ್ಟಿಮನಿ ತಿಳಿಸಿದರು.  

ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಒದಗಿಸುವುದು, ನೈಸರ್ಗಿಕ ಸಂಪನ್ಮೂಲ ಬಲ ಪಡಿಸುವುದು, ವಲಸೆ ತಡೆಗಟ್ಟುವುದು, ಆರ್ಥಿಕ ಭದ್ರತೆ ಒದಗಿಸುವುದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಿಗೆ ಆದ್ಯತೆಯನ್ನು ನೀಡಲಾಗಿದ್ದು, ಜನರಿಗೆ ಕೆರೆ, ಹಳ್ಳ, ಕಾಲುವೆ ಹುಳೆತ್ತುವುದು, ಅಮೃತ ಸರೋವರ ಹಾಗೂ ಜಲ ಸಂಜೀವಿನಿ ಕಾಮಗಾರಿಗಳಾದ ಕೃಷಿ ಹೊಂಡ, ಬದು ನಿರ್ಮಾಣ, ಕೊಳವೆ ಬಾವಿ ನಾಲಾ ಅಭಿವೃದ್ಧಿ, ಅರಣೀಕರಣ ಹೀಗೆ ಹಲವು ಕಾಮಗಾರಿಗಳನ್ನು ಕೂಲಿ ಕಾರ್ಮಿಕರು ಮಾಡಬಹುದು ಎಂದು ತಿಳಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ಬಿಟ್ಟು, ನಿಮ್ಮ ಸ್ವಂತ ಊರಿನಲ್ಲಿಯೇ ಉದ್ಯೋಗ ಖಾತರಿಯೋಜನೆಯಡಿ ಕೆಲಸ ಮಾಡಿ ನೆಮ್ಮದಿಯ ಜೀವನ ನಡೆಸುವುದರ ಜತೆಗೆ ಆರ್ಥಿಕವಾಗಿ ಸಬಲರಾಗಬೇಕು. ತಾಲೂಕಿನ ಕೂಲಿ ಕಾರ್ಮಿಕರು ಕೂಲಿ ಬೇಡಿಕೆಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಂಡು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.