ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಕುರಿತ ಕಾರ್ಯಾಗಾರ

ವಿಶೇಷ ನ್ಯಾಯಾಲಯ ಆದೇಶದಿಂದ 3,923 ಎಕರೆ ಅತಿಕ್ರಮಣ ತೆರವಿಗೆ ಆದೇಶ; 84 ಜನರಿಗೆ ಶಿಕ್ಷೆ: ನ್ಯಾಯಮೂರ್ತಿ ಬಿ.ಎ. ಪಾಟೀಲ 

ಧಾರವಾಡ 21: ಸರಕಾರಿ ಆಸ್ತಿಗಳ ಒತ್ತುವರಿ, ಅತಿಕ್ರಮಣ ತೆರವುಗೊಳಿಸಲು ಮತ್ತು ರಕ್ಷಣೆಗೆ ಸೂಕ್ತ ಆದೇಶ ನೀಡಲು ರಾಜ್ಯ ಸರಕಾರ 2011 ರಲ್ಲಿ ಸ್ಥಾಪಿಸಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಇಲ್ಲಿವರೆಗೆ 3,923 ಎಕರೆ ಸರಕಾರಿ ಭೂಮಿಯನ್ನು ಒತ್ತುವರಿ ಆಗಿರುವುದನ್ನು ತೆರವುಗೊಳಿಸಿ, ಮರಳಿ ಸರಕಾರದ ವಶಕ್ಕೆ ಬರುವಂತೆ ಆದೇಶಿಸಲಾಗಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರು ಹೇಳಿದರು. 

ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಧಾರವಾಡ ಜಿಲ್ಲಾಡಳಿತ ಸಂಯುಕ್ತವಾಗಿ ಆಯೋಜಿಸಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.  

ವಿಶೇಷ ನ್ಯಾಯಾಲಯ ಆರಂಭವಾದಾಗಿನಿಂದ ಇಲ್ಲಿವರೆಗೆ 23,646 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ. ಇವುಗಳ ಪೈಕಿ 18,601 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಆದೇಶಿಸಲಾಗಿದೆ. 5037 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಇತ್ಯರ್ಥಕ್ಕೆ ಬಾಕಿ ಇವೆ ಎಂದು ಅವರು ತಿಳಿಸಿದರು.  

ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಮಾಡಿ ಒತ್ತುವರಿ, ಅತಿಕ್ರಮಣವಾಗಿ ಸುಮಾರು 3,923 ಎಕರೆ ಸರಕಾರಿ ಭೂಮಿಯನ್ನು ಮರಳಿ ಸರಕಾರದ ವಶಕ್ಕೆ ನೀಡಿ ಆದೇಶಿಸಲಾಗಿದೆ. ಸರಕಾರಿ ಭೂಮಿ ಕಬಳಿಸಿದ್ದ ಒಟ್ಟು 84 ಜನರಿಗೆ 1 ವರ್ಷದ ಶಿಕ್ಷೆ ಹಾಗೂ ದಂಡ ವಿಧಿಸಿ, ಆದೇಶಿಸಲಾಗಿದೆ ಎಂದು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರು ಹೇಳಿದರು.  

ಗ್ರಾಮ ಆಡಳಿತಾಧಿಕಾರಿ ಪಾತ್ರ ಮುಖ್ಯ: ಸರಕಾರಿ ಆಸ್ತಿ ಸಂರಕ್ಷಣೆಯಲ್ಲಿ ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಬಹು ಮುಖ್ಯವಾಗಿದೆ. ಯಾವ ಗ್ರಾಮದಲ್ಲಿ ಎಷ್ಟು ಸರಕಾರಿ ಭೂಮಿ ಇದೆ ಎಂಬುದು ಅವರಿಗೆ ತಿಳಿದಿರುತ್ತದೆ. ಅವರ ತಕ್ಷಣದ ಮಾಹಿತಿ, ವರದಿ ಮುಖ್ಯವಾಗುತ್ತದೆ ಎಂದು ಅವರು ತಿಳಿಸಿದರು.  

ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಅಧಿನಿಯಮಗಳನ್ನು ಸರಿಯಾಗಿ ಅನುಷ್ಠಾನ ಮಾಡದಿದ್ದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರರಾಗುತ್ತಾರೆ. ವಿಚಾರಣೆಯಲ್ಲಿ ಅವರಿಗೂ ಶಿಕ್ಷೆ ಆಗಬಹುದು. ಆದ್ದರಿಂದ ಸರಕಾರದ ಆಸ್ತಿ, ಭೂಮಿ, ಖಾಲಿ ಜಾಗೆಗಳ ಬಗ್ಗೆ ಗ್ರಾಮ ಹಾಗೂ ವಾರ್ಡ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿ ಸಿಬ್ಬಂದಿಗಳು ಸದಾ ಕಾಲ ನಿಗಾ ವಹಿಸಬೇಕು. ಒತ್ತುವರಿ, ಅತಿಕ್ರಮಣ ಕಂಡು ಬಂದಲ್ಲಿ ತಮ್ಮ ಮೇಲಾಧಿಕಾರಿಗಳಿಗೆ ತಕ್ಷಣ ವರದಿ ನೀಡಬೇಕು. ಹಿರಿಯ ಅಧಿಕಾರಿಗಳು ನಮೂನೆಯಲ್ಲಿ ವಿಶೇಷ ನ್ಯಾಯಾಲಯಕ್ಕೆ ವರದಿ ದಾಖಲಿಸಬೇಕು ಎಂದು ಹೇಳಿದರು.  

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಲಭ್ಯವಿರುವ ಸರಕಾರಿ ಜಮೀನು, ಆಸ್ತಿಗಳ ಪೈಕಿ ಶೇ. 95 ರಷ್ಟು ಆಸ್ತಿಗಳ ಸರ್ವೆಯನ್ನು ಲ್ಯಾಂಡ್ ಬಿಟ್ ಆ್ಯಪ ಮೂಲಕ ಮಾಡಲಾಗಿದೆ. ಇದರೊಂದಿಗೆ ಆರ್‌.ಟಿ.ಸಿ ಯೊಂದಿಗೆ ಆಧಾರ ಜೋಡಣೆ ಕಾರ್ಯವು ಶೇ. 85 ರಷ್ಟು ಪೂರ್ಣಗೊಂಡಿದೆ. ಅನೇಕ ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.   

ಸಭೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಮಾ ಅವರು ಮಾತನಾಡಿದರು.  

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ವಿಶೇಷ ನ್ಯಾಯಾಲಯದ ವಿಲೇಖನಾಧಿಕಾರಿ ಹೆಚ್‌.ಕೆ.ನವೀನ್ ವಂದಿಸಿದರು.  

ವೇದಿಕೆಯಲ್ಲಿ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಎಸ್‌.ಪಾಲಯ್ಯ, ಕೆ.ಎಚ್‌.ಅಶ್ವತನಾರಾಯಣಗೌಡ, ನ್ಯಾಯಿಕ ಸದಸ್ಯ ಪಾಟೀಲ ನಾಗಲಿಂಗನಗೌಡ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಜಗದೀಶ ರೂಗಿ, ಉಪಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ದೊಡ್ಡಮನಿ ಇದ್ದರು.  

ನಂತರ ಜರುಗಿದ ಗೋಷ್ಠಿಗಳಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011 ಮತ್ತು ತಿದ್ದುಪಡಿ ಕಾಯ್ದೆ ಕುರಿತು ನ್ಯಾಯಮೂರ್ತಿ ಬಿ.ಎ.ಪಾಟೀಲ, ಮೋಜನಿ ಮತ್ತು ನಿಯಮಗಳು ಕುರಿತು ಜಗದೀಶ ರೂಗಿ, ಭೂ ಕಂದಾಯ ಅಧಿನಿಯಮ ಕಲಂ ನಂ 192(ಎ) ರ ಕುರಿತು ಎಸ್‌.ಪಾಲಯ್ಯ, ಕೆರೆ ಒತ್ತುವರಿ ಮತ್ತು ತೆರವುಗೊಳಿಸುವ ಪ್ರಕ್ರಿಯೆ ಕಾನೂನುಗಳ ಕುರಿತು ಸಿ.ಎಂ. ಅಮ್ಮನವರ, ಹೆಚ್‌.ಕೆ.ನವೀನ್ ಅವರು ಉಪನ್ಯಾಸ ನೀಡಿದರು.  

ಕಾರ್ಯಾಗಾರದಲ್ಲಿ ಕಂದಾಯ, ಅರಣ್ಯ, ಪಂಚಾಯತರಾಜ್, ಮಹಾನಗರ ಪಾಲಿಕೆ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.