ಬಿಜೆಪಿಯಿಂದ 10 ಸಾವಿರ ಆಹಾರ ಪೊಟ್ಟಣ ವಿತರಣೆ

ಬೆಂಗಳೂರು, ಮೇ 5, ಮೇ 5ರಂದು ಬೆಳಿಗ್ಗೆ 8ಗಂಟೆಯಿಂದ ಮೆಜೆಸ್ಟಿಕ್‌ನ ಬಸ್ ನಿಲ್ದಾಣದಲ್ಲಿ ಸ್ವಂತ ಊರಿಗೆ ಹೊರಟಿರುವ ಕೂಲಿ ಕಾರ್ಮಿಕರಿಗೆ 10 ಸಾವಿರ ಆಹಾರ ಪೊಟ್ಟಣಗಳು, 10 ಸಾವಿರ ನೀರಿನ ಬಾಟಲಿ, 10 ಸಾವಿರ ಮಾಸ್ಕ್‌ಗಳು, 3 ಸಾವಿರ ಬ್ರೆಡ್ ಪ್ಯಾಕೆಟ್‌ಗಳನ್ನು ಭಾರತೀಯ ಜನತಾ ಪಾರ್ಟಿಯ ವತಿಯಿಂದ ವಿತರಿಸಲಾಯಿತು.ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ  ಲಕ್ಷ್ಮಣ ಸಂಗಪ್ಪ ಸವದಿ, ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್, ಆಹಾರ ಖಾತೆ ಸಚಿವ ಗೋಪಾಲ್ಯಯ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ತಾರಾ ಅನುರಾಧ, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಬೆಂಗಳೂರು ಮಹಾನಗರ ಪಾಲಿಕೆ ಯುವ ಮೋರ್ಚಾ ಅಧ್ಯಕ್ಷ  ಸಪ್ತಗಿರಿ ಗೌಡ, ಬಿಜೆಪಿಯ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿಯವರು ಸೇರಿದಂತೆ ನೂರಾರು ಜನ ಕಾರ್ಯಕರ್ತರೊಂದಿಗೆ ಆಹಾರ ಮತ್ತು ನೀರಿನ ಬಾಟಲಿಗಳನ್ನು ವಿತರಿಸಲಾಯಿತು. 

ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಬೆಂಗಳೂರು ಸೇರಿದಂತೆ ರಾಜ್ಯದ ಶೇಕಡಾ75ರಷ್ಟು ಭಾಗ ಸಹಜ ಸ್ಥಿತಿಗೆ ಮರಳುತ್ತಿದೆ. ಬೆಂಗಳೂರಿನಲ್ಲಿ ಸರ್ಕಾರಿ ಕಾಮಗಾರಿಗಳು, ಖಾಸಗಿ ಕಾಮಗಾರಿಗಳು, ಕಟ್ಟಡ ಕೆಲಸಗಳು, ಕೈಗಾರಿಕೆಗಳು ನಡೆಯುತ್ತಿವೆ.  ಯಾರೂ ತಮ್ಮ ಊರುಗಳಿಗೆ ತೆರಳುವ ಅವಶ್ಯಕತೆಯಿಲ್ಲ. ತುರ್ತು ಕೆಲಸ ಇದ್ದವರು ಮಾತ್ರ ತೆರಳಿರಿ, ಆತಂಕ ಪಡಬೇಡಿ ಎಂದು ಮನವಿ ಮಾಡಿದರು.ಊರಿಗೆ ಹೋದ ಬಳಿಕ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಅವರು ಮನವಿ ಮಾಡಿದರು.ಎಸ್.ಟಿ. ಸೋಮಶೇಖರ್ ಮಾತನಾಡಿ, ಒಂದು ಕೋಟಿ ಕೊಡುತ್ತೇವೆ ಎಂದು ಹೇಳಿದುದರಿಂದಲೇ ಸರ್ಕಾರ ಕಾರ್ಮಿಕರಿಗೆ ಉಚಿತವಾಗಿ ಬಸ್ ಸೌಕರ್ಯ ಕಲ್ಪಿಸಿತು ಎನ್ನುತ್ತಿರುವುದು ಮೂರ್ಖತನವಾಗುತ್ತದೆ. ಸರ್ಕಾರವು ಈಗಾಗಲೇ ನೂರಾರು ರೀತಿಯಲ್ಲಿ ಸಮಾಜದ ಬೇರೆ ಬೇರೆ ಕ್ಷೇತ್ರಗಳಿಗೆ ಕೆಲಸ ಮಾಡುತ್ತಿದೆ. ಕೊರೋನ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂ ಪೂರ್ಣ ಯಶಸ್ವಿಯಾಗಿದೆ. 1 ಕೋಟಿ ಕೊಡುತ್ತೇನೆ ಎಂದು ಹೇಳಿ ಸಾವಿರ ಕೋಟಿ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.