ದೇಹ, ಮನಸ್ಸು, ಆತ್ಮಗಳ ಸಮತೋಲನಕ್ಕೆ ಯೋಗ, ಧ್ಯಾನ ಸಹಕಾರಿ
ವಿಜಯಪುರ, 24: ಯೋಗವು ನಮ್ಮ ದೇಶದಲ್ಲಿ ಸುಮಾರು 6 ರಿಂದ 7 ಸಾವಿರ ವರ್ಷಗಳ ಹಿಂದೆಯೇ ಇರುವ ಜಾಗತಿಕ ವಿದ್ಯೆ. ಯೋಗ ಒಂದು ವ್ಯಾಯಾಮ ಮಾತ್ರವಲ್ಲದೇ ನಮ್ಮೊಂದಿಗೆ ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ತಿಳಿಸುತ್ತದೆ. ಇದು ವ್ಯಕ್ತಿಯ ಮನಸ್ಸು, ದೇಹದಲ್ಲಿ ಸಮತೋಲನವನ್ನು ಕಾಪಾಡಲು ಹಾಗೂ ಕ್ರಿಯೆ, ಸಂಯಮ, ಚಿಂತನೆ, ಏಕಾಗ್ರತೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವನ್ನಾಗಿಸುತ್ತದೆ. ಯೋಗದಿಂದ ಒತ್ತಡ, ಆತಂಕ ಮತ್ತು ಸಂಘರ್ಷಯುಕ್ತವಾದ ಜೀವನದಿಂದ ಮುಕ್ತಿ ಹೊಂದಲು ಸಾಧ್ಯ. ಯೋಗ ಮುನಿಗಳಾದ ಪತಂಜಲಿ ಪ್ರಕಾರ ಮಾನವ ಆತ್ಮಸಾಕ್ಷಾತ್ಕಾರದ ಅತ್ಯುನ್ನತವಾದ ಗುರಿಯನ್ನು ತಲುಪಲು ಮಾಡುವ ಎಲ್ಲ ಪ್ರಕಾರದ ಅಧ್ಯಾತ್ಮಿಕ ಅಭ್ಯಾಸಗಳೇ ಯೋಗವೆಂದು ಉಲ್ಲೇಖಿಸಿದ್ದಾರೆ. ನಮ್ಮ ಋಷಿ-ಮುನಿಗಳು ನೀಡಿದ ಈ ಯೋಗದ ಕೊಡುಗೆ ಇಂದು ಇಡೀ ಜಗತ್ತಿಗೆ ಆರೋಗ್ಯ-ಸ್ವಾಸ್ಥ್ಯ ಕಾಪಾಡುವ ಸಾಧನವಾಗಿದೆ ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಎನ್.ಜಿ.ಓ. ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ದಿನಾಂಕ: 23-01-2025 ರಂದು ಜರುಗಿದ 9 ದಿನಗಳ ಯೋಗ ಶಿಬಿರದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ನಮ್ಮ ಭರತ ಖಂಡದ ಕೊಡುಗೆಯಾದ ಧ್ಯಾನವನ್ನು ಇಡೀ ಜಗತ್ತು ಇಂದು ಸ್ವೀಕರಿಸಿ, ಡಿಸೆಂಬರ 21 ರಂದು ವಿಶ್ವ ಧ್ಯಾನವನ್ನಾಗಿ ಆಚರಿಸಲಾಗುತ್ತಿದೆ. ಧ್ಯಾನವು ಮನುಷ್ಯನನ್ನು ಒತ್ತಡ, ಭಯ, ಆತಂಕ, ಖಿನ್ನತೆ ಮತ್ತು ಮಾನಸಿಕ ಅಶಾಂತಿಯನ್ನು ಗಮನಾರ್ಹವಾಗಿ ಕಡಿಮೆಗೊಳಿಸುತ್ತದೆ. ಜೀವನದಲ್ಲಿ ಸುಖ, ಶಾಂತಿ, ಮಾನಸಿಕ ನೆಮ್ಮದಿ, ಗ್ರಹಿಕೆ, ಸ್ವ-ಪರಿಕಲ್ಪನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಇಂದಿನ ಒತ್ತಡಮಯ ಮತ್ತು ಸಂಘರ್ಷಮಯವಾದ ಜೀವನದಲ್ಲಿ ನಾವೆಲ್ಲರೂ ಯೋಗ, ವ್ಯಾಯಾಮ ಮಾಡುವುದರ ಮೂಲಕ ಮಾನಸಿಕ ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಕೇವಲ ಈ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಿದರೆ ಸಾಲದು. ಇದು ಪ್ರತಿನಿತ್ಯದ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವದರೊಂದಿಗೆ ರಾಷ್ಟ್ರದ ಸ್ವಾಸ್ಥ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಾಗಬೇಕಾಗಿರುವುದು ಅತಿ ಅವಶ್ಯವೆಂದು ಹೇಳಿದರು.ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ ಎಸ್.ಎಲ್.ಇಂಗಳೇಶ್ವರ ಅವರು ಮಾತನಾಡಿ, ಇಂದು ಮನುಷ್ಯ ಏನೆಲ್ಲವನ್ನು ಏನೆಲ್ಲ ಗಳಿಸಬಲ್ಲ ಆದರೆ ಆರೋಗ್ಯವೆಂಬ ಅಮೂಲ್ಯ ಸಂಪತ್ತನ್ನು ಪಡೆಯಲು ಯೋಗ-ಧ್ಯಾನ, ವ್ಯಾಯಾಮ ,ದೈಹಿಕ ಕಸರತ್ತು ಜತೆಗೆ ಆರೋಗ್ಯ-ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಯೋಗ ಶಿಬಿರದಲ್ಲಿ ಆಯೋಜಿಸುತ್ತಿರುವ ಉತ್ತಮ ಕಾರ್ಯವಾಗಿದೆ. ಕೋವಿಡ್ ನಂತಹ ಕಾಲಘಟ್ಟದಲ್ಲಿ ಜನರು ಜೀವ-ಜೀವನ ಮತ್ತು ಆರೋಗ್ಯದ ಮಹತ್ವ ಎಷ್ಟೆಂಬುದನ್ನು ಅರಿತಿದ್ದಾರೆ. ಈ ದೇವಸ್ಥಾನದಲ್ಲಿ ಸುತ್ತಮುತ್ತಲಿನ ಜನರ ಯೋಗಕ್ಷೇಮ, ಆರೋಗ್ಯ ಮತ್ತು ಸ್ವಾಸ್ಥ್ಯಕ್ಕಾಗಿ ಯೋಗ ಶಿಬಿರವನ್ನು ಆಯೋಜಿಸುತ್ತಿರುವದು ಆರೋಗ್ಯ ಪರವಾದ ಕಾಳಜಿಗೊಂದು ಉತ್ತಮ ನಿದರ್ಶನವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಯೋಗ ಶಿಕ್ಷಕಿ ಶ್ರೀಮತಿ ಕಲ್ಪನಾ ರಜಪೂತ, ಧ್ಯಾನ ತರಬೇತುದಾರಿಣಿ ಶ್ರೀಮತಿ ಸರೋಜಾ ಬಾಗಲಕೋಟ ಇವರು ವೇದಿಕೆಯ ಮೇಲಿದ್ದರು. ಪ್ರೊ. ಎಂ.ಎಸ್.ಖೊದ್ನಾಪೂರ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಪಾಟೀಲ ವಂದಿಸಿದರು.ಕಾರ್ಯಕ್ರಮದಲ್ಲಿ ದೇವಸ್ಥಾನದ ಸೇವಾ ಸಮೀತಿ ಅಧ್ಯಕ್ಷ ಶ್ರೀ ಸಂತೋಷ ಪಾಟೀಲ, ರಮೇಶ ಕೋಷ್ಠಿ, ಎಸ್.ಜಿ.ನಿಂಗನಗೌಡ್ರ, ವೆಂಕಟೇಶ ಹೊಸಮನಿ, ಸ್ವಪ್ನೀಲ ಚವ್ಹಾಣ, ಬಾಬು ಕೋಲಕಾರ, ಬಿ.ಆರ್.ಬಿರಾದಾರ, ಪ್ರೊ. ಎಂ.ಆರ್. ಜೋಶಿ ಇನ್ನಿತರರು ಸಹ ಉಪಸ್ಥಿತರಿದ್ದರು.ಈ ಯೋಗ ಶಿಬಿರದಲ್ಲಿ ನವರಸಪುರ ವಿವಿಧ ಬಡಾವಣೆಗಳ ಸುಮಾರು 200 ಕ್ಕೂ ಹೆಚ್ಚು ಮಹಿಳೆಯರು, ಯುವಕರು, ಮಕ್ಕಳು, ಹಿರಿಯ ನಾಗರೀಕರು ಹಾಜರಿದ್ದರು.