ಉಚ್ಚಾಟನೆ ರದ್ದುಪಡಿಸಲು ನಾವು ಹೈಕಮಾಂಡ್ ಗಮನ ಸೆಳೆಯುತ್ತೇವೆ

We draw the attention of the high command to cancel the expulsion

ಉಚ್ಚಾಟನೆ ರದ್ದುಪಡಿಸಲು ನಾವು ಹೈಕಮಾಂಡ್ ಗಮನ ಸೆಳೆಯುತ್ತೇವೆ  

ಬೆಳಗಾವಿ 27: ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮದ ನೀರೀಕ್ಷೆ ಮೊದಲೇ ಇತ್ತು. ಹೈಕಮಾಂಡ್ ಉತ್ತರ ನೀಡಿದಾಗಲೇ ಉಚ್ಛಾಟನೆ ವಾಸನೆ ಬಡಿದಿತ್ತು. ಅದು ಆಗಬಾರದಿತ್ತು. ನಮ್ಮ ಮನಸ್ಸಿಗೂ ನೋವಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.  

ಬೆಳಗಾವಿ ಪ್ರವಾಸಿ ಮಂದಿರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯತ್ನಾಳ ಉಚ್ಛಾಟನೆ ವಿಚಾರ ಇದು ಮೊದಲೇ ಸುದ್ದಿ ಇತ್ತು. ವಿರೋಧಿ ಬಣಕ್ಕೂ ಎಚ್ಚರಿಕೆ ನೀಡಲಾಗಿದೆ. ಯತ್ನಾಳ ಮರಳಿ ಬಿಜೆಪಿಗೆ ಸೇರುತ್ತಾರೆಂಬ ವಿಶ್ವಾಸ ನನಗಿದೆ. ದೊಡ್ಡ ಸಮುದಾಯದ ನಾಯಕನ ವಿರುದ್ಧ ಕ್ರಮ ಕೈಗೊಳ್ಳಬಾರದಿತ್ತು. ನಮ್ಮ ಪಕ್ಷದ ನಾಯಕರು ಯತ್ನಾಳರನ್ನು ಬಳಸಿಕೊಳ್ಳಬೇಕಿತ್ತು. ನಾನು ಕೂಡ ವೇದಿಕೆ ಮೇಲೆ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದೇನೆ. ಸೋಮಶೇಖರಂಥ ಕೆಲವರ ಮೇಲೆ ಪಕ್ಷದ ನಾಯಕರಿಗೆ ಪ್ರೀತಿ ಇದೆ. ಅದಕ್ಕೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ರಮೇಶ ಜಾರಕಿಹೊಳಿ ಅಸಮಾಧಾನ ಹೊರ ಹಾಕಿದರು.  

ರಾಜ್ಯದ ಜನರ ಭಾವನೆ ತಿಳಿದು ಮಾತಾಡಬೇಕು ಎಂದು ನಿನ್ನೆ ಮಾತಾಡಿರಲಿಲ್ಲ. ಯತ್ನಾಳ ನಮ್ಮ ಪಕ್ಷ ಮತ್ತು ಸಮುದಾಯದ ದೊಡ್ಡ ನಾಯಕ. ಅದೇ ರೀತಿ ಪಕ್ಷದ ನಿರ್ಧಾರ ಪ್ರಶ್ನಿಸುವ ದೊಡ್ಡ ವ್ಯಕ್ತಿಯೂ ನಾನಲ್ಲ. ನಾಳೆ ಯತ್ನಾಳ ಬೆಂಗಳೂರಿಗೆ ಬರುತ್ತಾರೆ. ನಾವೆಲ್ಲರೂ ಸೇರಿ ಚರ್ಚಿಸುತ್ತೇವೆ. ಯತ್ನಾಳ ಕ್ರಮದ ಬಗ್ಗೆ ಪುನರ್ ಪರೀಶೀಲನೆ ಮಾಡುವಂತೆ ಪತ್ರದ ಮುಖೇನ ಹೈಕಮಾಂಡ್‌ಗೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.  

ನಾನು ಮತ್ತು ಯತ್ನಾಳ ಸೇರಿ ಎಲ್ಲರೂ ಬಿಜೆಪಿಯಲ್ಲೇ ಇರುತ್ತೇವೆ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಯತ್ನಾಳ ಜೊತೆಗೆ ನಾವಿದ್ದೇವೆ. ಯತ್ನಾಳ ಒಂಟಿ ಅಲ್ಲ ಅದೇ ರೀತಿ ಮುಂದಿನ ಸಲ ನಮ್ಮದೇ ಸರ್ಕಾರ ಬರುತ್ತದೆ. ಸೂರ್ಯ, ಚಂದ್ರನಿಗೂ ಗೃಹಣ ಹಿಡಿಯುತ್ತದೆ. ಹಾಗಾಗಿ, ನಮ್ಮಂಥವರಿಗೆ ಕೆಲ ಸಮಸ್ಯೆ ಆಗಿವೆ. ನಾವೆಲ್ಲರೂ ಗಟ್ಟಿ ಇದ್ದೇವೆ, ಎಂದು ರಮೇಶ ಜಾರಕಿಹೊಳಿ ಯತ್ನಾಳ ಪರ ಬ್ಯಾಟಿಂಗ್ ಬೀಸಿದರು.  

ಹೈಕಮಾಂಡ್ ನ ಟಾಪ್ 10 ನಾಯಕರ ಜೊತೆಗೆ ನಿನ್ನೆ ನಾನು ಮಾತನಾಡಿದ್ದೇವೆ. ಕೆಟ್ಟ ಘಳಿಗೆ, ಉಚ್ಚಾಟನೆ ರದ್ದುಪಡಿಸಲು ನಾವು ಹೈಕಮಾಂಡ್ ಗಮನ ಸೆಳೆಯುತ್ತೇವೆ. ನಾಳೆ ಕುಮಾರ ಬಂಗಾರ​‍್ಪ ಮನೆಯಲ್ಲಿ ನಮ್ಮ ನಾಯಕರು ಸಭೆ ಮಾಡುತ್ತೇವೆ ಎಂದು ಇದೇ ವೇಳೆ ರಮೇಶ ಜಾರಕಿಹೊಳಿ ತಿಳಿಸಿದರು.  

ಬಿಜೆಪಿ ನಮಗೆ ತಾಯಿ ಸಮಾನ, ತಪ್ಪು ಗ್ರಹಿಕೆಯಿಂದ ಆಗಿರಬಹುದು.  ಹೈಕಮಾಂಡ್ ಜೊತೆಗೆ ಮಾತನಾಡುತ್ತೇವೆ. ರಾಷ್ಟ್ರೀಯ ಮಟ್ಟದ ನಾಯಕರ ಮೇಲೆ ನಮಗೆ ವಿಶ್ವಾಸ ಇದೆ. ಪುನಃ ಯತ್ನಾಳ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಇನ್ನು ವಿಜಯೇಂದ್ರ ಬಗ್ಗೆ ನಾನು ಇಂದು ಮಾತನಾಡಲ್ಲ, ಹಿಂದಿನ ಮಾತಿಗೆ ನಾನು ಬದ್ಧನಿದ್ದೇನೆ ಎಂದು ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು.