ವೀರಶೈವ ಲಿಂಗಾಯತರು ಒಂದೇ ವೇದಿಕೆಯಡಿ ಗುರುತಿಸಿಕೊಳ್ಳಬೇಕಿದೆ: ಶಾಸಕ ಸವದಿ
ಅಥಣಿ 31: ರಾಜಕೀಯ, ಸಾಮಾಜಿಕವಾಗಿ ಪ್ರಭಾವಿಯಾಗಲು ವೀರಶೈವರಾದ ನಾವೆಲ್ಲ ನಮ್ಮ ನಮ್ಮಲ್ಲಿಯ ಒಳ ಪಂಗಡಗಳನ್ನು ಬದಿಗೊತ್ತಿ ಒಂದೇ ವೇದಿಕೆಯಡಿ ಒಂದಾಗಲೇ ಬೇಕಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಅಭಿಪ್ರಾಯ ಪಟ್ಟರು.
ಅವರು ಅಥಣಿಯ ಹೇಮ-ವೇಮ ಪ್ರತಿಷ್ಠಾನದಡಿ ನಿರ್ಮಾಣಗೊಳ್ಳುತ್ತಿರುವ ರೆಡ್ಡಿ ಸಮುದಾಯ ಭವನದ ಮೊದಲ ಮಹಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಮೊದಲಿನಿಂದಲೂ ನಾವೆಲ್ಲ ಶೈವ ಸಂಪ್ರದಾಯಕ್ಕೆ ಸೇರಿದವರು ಮುಂದೆ ನಾವು ವೀರಶೈವರಾಗಿ ನಮ್ಮ ನಮ್ಮ ಉದ್ಯೋಗಕ್ಕೆ ಅನಗುಣವಾಗಿ ಒಳ ಪಂಗಡಗಳಲ್ಲಿ ವಿಂಗಡಣೆ ಮಾಡಿಕೊಂಡೆವು ಎಂದ ಅವರು 12ನೇ ಶತಮಾನದಲ್ಲಿ ಬಸವಣ್ಣನವರ ಪ್ರಭಾವಕ್ಕೆ ಒಳಪಟ್ಟು ನಾವೆಲ್ಲ ವೀರಶೈವ ಲಿಂಗಾಯತರಾದೆವು ಎಂದರು.
ಅನೇಕ ಕಾರಣಗಳಿಂದ ನಾವು ನಮ್ಮ ಮೂಲ ಹೊರಗಿಟ್ಟು ಒಳ ಪಂಗಡಗಳಲ್ಲಿ ಒಡೆದು ಹೋದ ಪರಿಣಾಮ ನಮ್ಮ ರಾಜಕೀಯ ಮತ್ತು ಸಾಮಾಜಿಕ ಶಕ್ತಿ ಕುಗ್ಗಿಸಿಕೊಂಡಿದ್ದೇವೆ ಎಂದ ಅವರು ನಾವು ಸಾಮಾಜಿಕ ಮತ್ತು ರಾಜಕೀಯವಾಗಿ ಪ್ರಭಾವಿಗಳಾಗಲು ವೀರಶೈವ ಲಿಂಗಾಯತ ಎನ್ನುವ ಒಂದೇ ವೇದಿಕೆಯಡಿ ಬರಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ನಿರ್ಮಾಣ ಹಂತದಲ್ಲಿರುವ ರೆಡ್ಡಿ ಸಮುದಾಯ ಭವನ ಪೂರ್ಣಗೊಂಡ ನಂತರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಅನೇಕ ರಚನಾತ್ಮಕ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಿ ಎಂದ ಅವರು ರೆಡ್ಡಿ, ಪಂಚಮಸಾಲಿ, ಜಂಗಮ ಸಮಾಜದ ಸಮುದಾಯ ಭವನಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವೆ ಎಂದ ಅವರು ಈ ಸಮುದಾಯ ಪೂರ್ಣಗೊಳ್ಳಲು ಸಮುದಾಯದ ಪ್ರತಿಯೊಬ್ಬರೂ ಕೂಡ ತಮ್ಮ ಶಕ್ತ್ಯಾನುಸಾರ ದೇಣಿಗೆ ಕೊಡಬೇಕು ಆಗ ಮಾತ್ರ ಈ ಭವನ ನಮ್ಮದು ಎನ್ನುವ ಭಾವ ಬರುತ್ತದೆ ಎಂದರು.
ಈ ಸಮುದಾಯ ಭವನದ ನೆಲ ಮಹಡಿ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಮಹಡಿ ನಿರ್ಮಾಣಕ್ಕಾಗಿ ಮುಜರಾಯಿ ಇಲಾಖೆಯಿಂದ 55 ಲಕ್ಷ ರೂ.ಅನುದಾನ ಮಂಜೂರಾಗಿದೆ ಮತ್ತು ಈ ಪೈಕಿ ಈಗಾಗಲೇ 27 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದ ಅವರು ಈ ಭವನದ ನಿರ್ಮಾಣಕ್ಕೆ ನಾನು ಆರ್ಥಿಕವಾಗಿ ಸಹಾಯ, ಸಹಕಾರ ಮಾಡಲು ಸಿದ್ಧನಿರುವೆ ಎಂದು ಹೇಳಿದರು.
ವೇಮ-ಹೇಮ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ಎ.ಸಂಕ್ರಟ್ಟಿ ಮಾತನಾಡಿ, ಸಮುದಾಯ ಭವನದ ಸುತ್ತು ಗೋಡೆ ನಿರ್ಮಾಣ ಕಾಮಗಾರಿ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದರೂ ಕೂಡ ಕಾಮಗಾರಿ ಪ್ರಾರಂಭಗೊಂಡಿಲ್ಲ ಎಂದ ಅವರು ತಕ್ಷಣ ಕಾಮಗಾರಿ ಮಂಜೂರಾತಿಗೆ ಜಿ.ಪಂ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಶಾಸಕರಲ್ಲಿ ಮನವಿ ಮಾಡಿದರು.
ರೆಡ್ಡಿ ಸಮುದಾಯದ ಪ್ರವೀಣ ಹುಣಸಿಕಟ್ಟಿ, ಶೇಖರ ಕನಕರೆಡ್ಡಿ, ಅರ್ಜುನ ನಾಯಿಕ, ಡಾ.ಗುಂಜಿಗಾಂವಿ, ಶ್ರೀಶೈಲ ನಾಯಿಕ, ನಿಂಗಪ್ಪ ಖೋಕಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸುರೇಶ ದಾಸರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.