ಅಪ್ಪರತುಂಗಾ ಬಾಕಿ ನೀರು ಬಿಡುಗಡೆಗಾಗಿ, ಕಾಲುವೆಗೆ ಬಿಡುವ ನೀರು ಬಂದ್ ಮಾಡಿಸುವ ಅವಧಿ ವಿಸ್ತರಿಸಿ- ರೈತ ಮುಖಂಡ ರವೀಂದ್ರಗೌಡ ಪಾಟೀಲ
ರಾಣೇಬೆನ್ನೂರು:7 ಜಿಲ್ಲೆಗೆ ವರದಾನದಂತಿರುವ ಅಪ್ಪರತುಂಗಾ ಯೋಜನೆಯ ನೀರು ಅಧಿಕಾರಿಗಳು, ತಾಂತ್ರಿಕ ವರ್ಗದವರ ಬೇಜವಾಬ್ದಾರಿತನದಿಂದ ಕೆಲವೊಮ್ಮೆ ರೈತರಿಗೆ ದೊರೆಯದೆ ಆ ನೀರನ್ನೇ ನಂಬಿದ ರೈತ ಆಕಾಶದ ಕಡೆ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಳೆದ 2024 ರ ಜುಲೈ ತಿಂಗಳ ಪ್ರಾರಂಭದಲ್ಲಿ ಮುಖ್ಯ ಕಾಲುವೆಗೆ ನೀರಾವರಿ ಇಲಾಖೆಯವರು ನೀರು ಹರಿಸಿದರೆ ಕಳಪೆ ಕಾಮಗಾರಿ ಮಾಡಿ ಮಣ್ಣಿನ ತಡೆಗೋಡೆ ನಿರ್ಮಿಸಿದ್ದರಿಂದ ಹೊನ್ನಾಳಿ ಹತ್ತಿರದ ಬಸವನಾಳ ಗ್ರಾಮದ ಹತ್ತಿರ ಮುಖ್ಯ ಕಾಲುವೆ ಒಡೆದು ಬಹುದೊಡ್ಡ ಪ್ರಮಾಣದಲ್ಲಿ ಕಾಲುವೆಯ ತಡೆಗೋಡೆ ಕೊಚ್ಚಿ ಹೋಯಿತು. ಈ ಕಾಲುವೆಯ ನೀರನ್ನೇ ನಂಬಿದ ಸಾವಿರಾರು ರೈತರು ದಿಕ್ಕು ಕಾಣದಾದರು. ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರು ಬಹುದೊಡ್ಡ ನಷ್ಟ ಅನುಭವಿಸಬೇಕಾಯಿತು. ಕಾಲುವೆ ರಿಪೇರಿಗೆ ಕನಿಷ್ಟ 2 ತಿಂಗಳು ಕಾಲಾವಕಾಶ ಬೇಕಾಯಿತು. ನಂತರ ಕಾಲುವೆಗೆ ನೀರು ಹರಿಸಲಾಯಿತು. ನಮಗೆ ಕನಿಷ್ಟ 2 ತಿಂಗಳು ನೀರು ಸಿಗದಂತಾಯಿತು. ಈಗ ಕಾಲುವೆಗೆ ನೀರು ಹರಿಸುವುದನ್ನು ಬಂದ್ ಮಾಡುವ ನಿಗದಿತ ಅವಧಿ ಬಂದಿದ್ದು ನಮ್ಮ ಬಾಕಿ ನೀರು ಅಂದರೆ 2 ತಿಂಗಳು ಕಾಲುವೆ ರಿಪೇರಿ ನೆಪದಲ್ಲಿ ಬಂದ್ ಆಗಿದ್ದು ನಮಗೆ ಬರಬೇಕಾಗಿದ್ದ ಬಾಕಿ ನೀರನ್ನು ನಮಗೆ ನ್ಯಾಯಯುತವಾಗಿ ಹರಿಸಲು ನೀರ ಬಂದ್ ಮಾಡುವ ಅವಧಿಯನ್ನು ಫೆಬ್ರುವರಿ ತಿಂಗಳ ಅಂತ್ಯದವರೆಗೆ ವಿಸ್ತರಿಸಿ ನ್ಯಾಯ ದೊರಕಿಸಿಕೊಡಬೇಕು. ನಮ್ಮ ಪಾಲಿನ ಬಾಕಿ ನೀರನ್ನು ಅವಧಿ ಮುಂದುವರೆಸುವ ಮೂಲಕ ನ್ಯಾಯ ಒದಗಿಸಬೇಕೆಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್. ಪಾಟೀಲ ಒತ್ತಾಯಿಸಿದ್ದಾರೆ.
ಅವರು ಇಂದು ಶಿವಮೊಗ್ಗ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್‌ರಿಗೆ ಈ ಬಗ್ಗೆ ಸುಧೀರ್ಘ ಪತ್ರ ಬರೆದು ಇ-ಮೇಲ್ ಸಂದೇಶ ಕಳುಹಿಸಿ ರೈತರ ಸಮಸ್ಯೆ ವಿವರಿಸಿದ್ದಾರೆ. ಅಧಿಕಾರಿಗಳ, ಗುತ್ತಿಗೆದಾರರ, ತಾಂತ್ರಿಕ ವರ್ಗದವರಿಂದ ಆದ ನಷ್ಟಕ್ಕೆ ನ್ಯಾಯ ಕೋರಿದ್ದಾರೆ.