ಧಾರವಾಡ 23: ಮಹಿಳೆಯರು ಮತ್ತು ವಿಕಲಚೇತನರು ಸಮರ್ಥವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬಲ್ಲರು ಎಂಬುದನ್ನು ಸಾಬೀತು ಪಡಿಸಲು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾಗಿದ್ದ 16 ಸಖಿ ಹಾಗೂ 7 ವಿಕಲಚೇತನರ ಮತಗಟ್ಟೆಗಳು ಈ ಬಾರಿಯ ಚುನಾವಣೆಯ ಮೆರಗು ಹೆಚ್ಚಿಸಿದವು.
ಮಹಿಳೆಯರಿಬ್ಬರು ಮತಚಲಾವಣೆಯ ಹೆಮ್ಮೆ ಪ್ರದಶರ್ಿಸುವ ಭಾವಚಿತ್ರಗಳೊಂದಿಗೆ ಅಲಂಕರಿಸಿದ್ದ ಸ್ವಾಗತ ಕಮಾನುಗಳು, ರಂಗವಲ್ಲಿ, ತಳಿರು, ತೋರಣ, ಬಲೂನು, ಚಿತ್ತಾರದ ಕಾಗದ, ಪರದೆಗಳಿಂದ ಮತಗಟ್ಟೆಗಳು ಕಂಗೊಳಿಸುತ್ತಿದ್ದವು. ಮಕ್ಕಳಿಗಾಗಿ ವಿಶೇಷ ಆಟದ ಸ್ಥಳ( ಕಿಡ್ಸ್ ಕಾರ್ನರ್) ಸ್ಥಾಪಿಸಿದ್ದು ಗಮನಸೆಳೆಯಿತು. ಸಖಿ ಮತಗಟ್ಟೆಗಳ ಮಹಿಳಾ ಸಿಬ್ಬಂದಿಗೆ ಸೀರೆಗಳು ಹಾಗೂ ವಿಕಲಚೇತನರ ಮತಗಟ್ಟೆಗಳ ಅಧಿಕಾರಿ, ಸಿಬ್ಬಂದಿಗೆ ಖಾದಿ ಜಾಕೆಟ್ ಗಳನ್ನು ಜಿಲ್ಲಾ ಸ್ವೀಪ್ ಸಮಿತಿ ಒದಗಿಸಿತ್ತು.
ಮತಗಟ್ಟೆಗಳಿಗೆ ಬಂದ ತಕ್ಷಣ ಸಂತಸದ ವಾತಾವರಣ ಕಂಡು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗಿನ ಅಭಿಮಾನ ಇಮ್ಮಡಿಯಾಗುವಂತಿದೆ. ಇದೇ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವದು ಖುಷಿ ತಂದಿದೆ ಎಂದು ಧಾರವಾಡ ದೊಡ್ಡನಾಯಕನಕೊಪ್ಪದ ಪಲ್ಲವಿ ಹರ್ಷ ವ್ಯಕ್ತಪಡಿಸಿದರು.