ಸಂತ ಸೇವಾಲಾಲ್, ಸರ್ವಜ್ಞ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ - ಸಿದ್ರಾಮೇಶ್ವರ
ಕೊಪ್ಪಳ 03: ಫೆಬ್ರವರಿ 15 ರಂದು ಸಂತ ಸೇವಾಲಾಲ್ ಜಯಂತಿ ಹಾಗೂ ಫೆ. 20 ರಂದು ತ್ರಿಪದಿ ಕವಿ ಸರ್ವಜ್ಞ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಅವರು ಸೋಮವಾರ ಸಂತ ಸೇವಾಲಾಲ್ ಹಾಗೂ ತ್ರಿಪದಿ ಕವಿ ಸರ್ವಜ್ಞ ಜಯಂತಿ ಆಚರಣೆ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್-2ರ ಸಭಾಂಗಣದಲ್ಲಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಂತ ಸೇವಾಲಾಲ್ ಜಯಂತಿಯನ್ನು ಫೆ.15 ರಂದು ಮತ್ತು ಸರ್ವಜ್ಞ ಜಯಂತಿಯನ್ನು ಫೆ.20ರಂದು ಸರಳವಾಗಿ ಆಚರಿಸಬೇಕೆಂಬ ಸಮುದಾಯಗಳ ಮುಖಂಡರ ಕೋರಿಕೆ ಮೇರೆಗೆ ಆಯಾ ದಿನದಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಈ ಇಬ್ಬರೂ ಮಹನಿಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪುಪ್ಪಾರ್ಚನೆ ಮಾಡಿ ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿರಬೇಕೆಂದು ಹೇಳಿದರು.
ಜಯಂತಿ ದಿನದಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳು ಹಾಗೂ ಸರಕಾರಿ ಕಛೇರಿಗಳಲ್ಲಿ ಸಂತ ಸೇವಾಲಾಲ್ ಮತ್ತು ತ್ರಿಪದಿ ಕವಿ ಸರ್ವಜ್ಞರ ಜಯಂತಿಯನ್ನು ಆಚರಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸೇವಾಲಾಲ್ ಹಾಗೂ ಸರ್ವಜ್ಞ ಜಯಂತಿ ಅಂಗವಾಗಿ ಜಿಲ್ಲಾಡಳಿತ ಭವನದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಕೊಪ್ಪಳ ನಗರಸಬೆ ಪೌರಾಯುಕ್ತರಾದ ಗಣಪತಿ ಪಾಟೀಲ್, ಸಂತ ಸೇವಾಲಾಲ್ ಸಮಾಜದ ಮುಖಂಡರಾದ ಯಮನೂರ್ಪ ಅಚಲಾಪುರತಾಂಡ, ಕಮಲಾ ನಾಯ್ಕ ಹುಲಿಗಿ ತಾಂಡ, ಪರಸಪ್ಪ ಕಲಕೇರಾ ತಾಂಡ, ಹನಮಂತ ಮಡ್ಡಿ ಕನಕಾಪುರ ತಾಂಡ, ಚಂದ್ರಶೇಖರ ದೊಡ್ಡಮನಿ, ರಾಜುನಾಯ್ಕ ಹೊಸಮಾದ್ಲಾಪುರ ಹಾಗೂ ಸರ್ವಜ್ಞ (ಕುಂಬಾರ) ಸಮಾಜದ ಮುಖಂಡರಾದ ಕಳಕಪ್ಪ ಕುಂಬಾರ, ಅಶೋಕ ಕುಂಬಾರ, ಅಂದಪ್ಪ ಕುಂಬಾರ, ಮಲ್ಲಪ್ಪ ಕುಣಿಕೇರಿ, ಪ್ರಭು ಕುಂಬಾರ, ಸುರೇಶ ಕುಂಬಾರ ಸೇರಿದಂತೆ ಇತರೆ ಸಮಾಜದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.