ರೈತರಿಗೆ ಹಕ್ಕುಪತ್ರ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು: ಶಾಸಕ ಶ್ರೀನಿವಾಸ ಮಾನೆ
ಹಾನಗಲ್ 02: ಅರ್ಹ ಅನಧೀಕೃತ ಸಾಗುವಳಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಕ್ಕುಪತ್ರ ನೀಡಲು ಸರ್ಕಾರ ಈಗಾಗಲೇ ಸಮಯ ನಿಗದಿ ಪಡಿಸಿದ್ದರೂ ಸಹ ತಹಶೀಲ್ದಾರ್ ಕಚೇರಿಯಲ್ಲಿ ಈ ಪ್ರಕ್ರಿಯೆ ವಿಳಂಬವಾಗುತ್ತಿರುವುದಕ್ಕೆ ಶಾಸಕ ಶ್ರೀನಿವಾಸ ಮಾನೆ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಕ್ಕುಪತ್ರ ನೀಡುವ ಪ್ರಕ್ರಿಯೆ ಚುರುಕುಗೊಳಿಸಿ, ಕಾಲಮಿತಿಯೊಳಗೆ ಪೂರ್ಣಗೊಳಿಸಿ. ಬಗರ್ ಹುಕುಂ ಸಮಿತಿ ಸಭೆಗಳನ್ನು ಪ್ರತಿ ತಿಂಗಳು ಕನಿಷ್ಟ 2 ಬಾರಿ ನಡೆಸಬೇಕು. ನಾನಾ ಕಾರಣಗಳಿಂದ ಸಮಿತಿ ಸಭೆ ಮುಂದೂಡಿದರೆ, ಮರುದಿನವೇ ಸಭೆ ನಡೆಸಿ, ನಿರ್ಲಕ್ಷಿಸುವಂತಿಲ್ಲ ಎಂದರು.
ನಮೂನೆ 57ರಲ್ಲಿ ಸ್ವೀಕರಿಸಿದ ಅರ್ಜಿಗಳಲ್ಲಿ ಈಗಾಗಲೇ ಅರ್ಹ ಎಂದು ಪರೀಶೀಲಿಸಿಕೊಂಡಿರುವ ರೈತರಿಗೆ ಹಕ್ಕುಪತ್ರ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಹಾಗೆಯೇ ಕೆಲವು ನಮೂನೆ 53 ರ ಪ್ರಕರಣಗಳು ಬಾಕಿ ಉಳಿದಿದ್ದು ಅವುಗಳನ್ನೂ ಸಹ ಬೇಗ ಇತ್ಯರ್ಥ ಪಡಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಹಿಂದೆ ಬಗರ್ ಹುಕುಂ ಸಮಿತಿ ಸಭೆಗಳಲ್ಲಿ ಜಮೀನು ಮಂಜೂರಾತಿ ಮಾಡಿ ಆದೇಶಿಸಲಾಗಿದ್ದರೂ ಹಕ್ಕುಪತ್ರ ನೀಡಲು, ಪಹಣಿಯಲ್ಲಿ ದಾಖಲಿಸಲು ವಿಳಂಬ ಮಾಡುತ್ತಿರುವುದಕ್ಕೆ ಸಾಕಷ್ಟು ದೂರು ಕೇಳಿ ಈ ಕುರಿತು ವೈಯಕ್ತಿಕವಾಗಿ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಗರ್ ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ರೇಣುಕಾ ಎಸ್., ಶಿರಸ್ತೆದಾರ ಎಂ.ಬಿ.ಮುಗದುಂ, ಕಂದಾಯ ನೀರೀಕ್ಷಕರಾದ ಆರ್.ಎಚ್.ಮಲ್ಲಾಡದ, ಪಿ.ಜೆ.ನೆಗಳೂರ,ಶಿವಾನಂದ ಕೊಟಗಿ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.